ಮುಂಬೈ: ಬಾಂಬೆ ಹೈಕೋರ್ಟ್ ಮಂಗಳವಾರ ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದು, ಶಬ್ದ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡದೆಯೇ ಹಬ್ಬಗಳನ್ನು ಆಚರಿಸಬಹುದು ಎಂದು ಹೇಳಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರಿದ್ದ ಪೀಠವು, ರಸ್ತೆಗಳಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ. ಅಲ್ಲದೆ ಧಾರ್ಮಿಕ ಮೆರವಣಿಗೆಗಳ ವೇಳೆ ಲೌಡ್‌ಸ್ಪೀಕರ್‌ಗಳು, ಡಿಜೆಗಳು ಮತ್ತು ಲೇಸರ್ ಲೈಟ್ ಗಳ ಬಳಕೆಯು "ಸಂಪೂರ್ಣ ಅನಗತ್ಯ" ಎಂದು ಅಭಿಪ್ರಾಯಪಟ್ಟಿದೆ.
"ಈ ಎಲ್ಲಾ ಲೌಡ್‌ಸ್ಪೀಕರ್‌ಗಳು ಮತ್ತು ಪಟಾಕಿಗಳನ್ನು ಬಳಸುವುದರಿಂದ ನಮಗೆ ದೇವರಿಂದ ಹೆಚ್ಚುವರಿ ಆಶೀರ್ವಾದ ಸಿಗುತ್ತದೆಯೇ? ಜವಾಬ್ದಾರಿಯುತ ಸಮಾಜವಾಗಿ, ನಾವು ಇವೆಲ್ಲಕ್ಕೂ ಅಂತ್ಯ ಹಾಡಬೇಕು. ಉದಾಹರಣೆಗೆ 'ವಾರಿ' ಮೆರವಣಿಗೆ(ಪಂಢರಪುರಕ್ಕೆ ಕಾಲ್ನಡಿಗೆ ಕೈಗೊಳ್ಳುವ ಯಾತ್ರೆ)ಯನ್ನು ತೆಗೆದುಕೊಳ್ಳಿ. ಅಲ್ಲಿ ಯಾವುದೇ ಲೌಡ್‌ಸ್ಪೀಕರ್ ಅಥವಾ ಶಬ್ದವಿಲ್ಲದೆ ಅದನ್ನು ಎಷ್ಟು ಶಾಂತಿಯುತವಾಗಿ ನಡೆಸಲಾಗುತ್ತದೆ" ಎಂದು ಹೈಕೋರ್ಟ್ ಹೇಳಿದೆ.
ಮೆರವಣಿಗೆಗಳ ವೇಳೆ ಉಂಟಾಗುವ ತೀವ್ರ ಶಬ್ದ ಮತ್ತು ವಾಯು ಮಾಲಿನ್ಯದ ವಿಷಯವನ್ನು ನ್ಯಾಯಾಲಯವು ಸೋಮವಾರ ಸ್ವಯಂಪ್ರೇರಿತವಾಗಿ (suo motu) ಪರಿಗಣನೆಗೆ ತೆಗೆದುಕೊಂಡಿತ್ತು.
ರಸ್ತೆಗಳಲ್ಲಿ ಪಟಾಕಿ ಸಿಡಿಸುವುದು ಅಪಾಯಕಾರಿ ಮಾತ್ರವಲ್ಲದೆ, ವಿಷಕಾರಿ ಮಾಲಿನ್ಯಕ್ಕೂ ಕಾರಣವಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
"ಪಟಾಕಿಗಳನ್ನು ಸಿಡಿಸುವುದಕ್ಕೆ ಸಂಪೂರ್ಣ ಅವಕಾಶವಿರಬಾರದು. ಮುಂಬೈನಂತಹ ನಗರದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿಗಳಿಗೆ ಏಕೆ ಅನುಮತಿ ನೀಡಬೇಕು? ಮುಂಬೈನಲ್ಲಿ ವಾಯು ಮಾಲಿನ್ಯ ಮತ್ತು ಮಂಜಿನ ವಾತಾವರಣ ಪ್ರಾರಂಭವಾಗುವ ಸಮಯವಿದು. ಇದನ್ನು ತಡೆಯಲೇಬೇಕು. ಹಗಲಿರಲಿ ಅಥವಾ ರಾತ್ರಿಯಿರಲಿ, ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿಗಳನ್ನು ಹಚ್ಚುವಂತಿಲ್ಲ," ಎಂದು ನ್ಯಾಯಾಲಯ ಹೇಳಿದೆ.