ಬೆಂಕಿ ನಂದಿಸುತ್ತಿರುವ ಸಿಬ್ಬಂದಿ. 
ದೇಶ

Yamuna Expressway ದುರಂತ: ನೀವು ಸತ್ತರೂ ಚಿಂತೆಯಿಲ್ಲ, ಬಸ್ ಮಾತ್ರ ನಿಲ್ಲಿಸಲ್ಲ: ಪ್ರಯಾಣಿಕರ ಎಚ್ಚರಿಕೆ ನಿರ್ಲಕ್ಷಿಸಿ 9 ಜನರ ಸಾವಿಗೆ ಕಾರಣವಾದ ಚಾಲಕ..!

ದೆಹಲಿ ಕಾಶ್ಮೀರಿ ಗೇಟ್‌ನಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿದ್ದ ರಾಜ್ ಕಲ್ಪನಾ ಟ್ರಾವೆಲ್ಸ್‌ ಬಸ್ ಬುಧವಾರ ತಡರಾತ್ರಿ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಕಿಗೆ ಸಿಲುಕಿದ್ದು, ಘಟನೆಯಲ್ಲಿ 9 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಗ್ರೇಟರ್ ನೋಯ್ಡಾ: ನೀವು ಸತ್ತರೂ ನಮಗೆ ಚಿಂತೆಯಿಲ್ಲ, ನಾವು ಬಸ್ ನಿಲ್ಲಿಸುವುದಿಲ್ಲ... ಇದು ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಬೆಂಕಿ ಅವಘಡಕ್ಕೀಡಾದ ಖಾಸಗಿ ಬಸ್ ಚಾಲಕ ಪ್ರಯಾಣಿಕರಿಗೆ ನೀಡಿದ್ದ ಉದ್ಧಟತನದ ಉತ್ತರ..!

ಚಾಲಕ ಮತ್ತು ನಿರ್ವಾಹಕನ ಈ ಬೇಜವಾಬ್ದಾರಿತನದಿಂದಾಗಿ ಒಂಬತ್ತು ಪ್ರಯಾಣಿಕರು ಸಜೀವ ದಹನಗೊಂಡಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ದೆಹಲಿ ಕಾಶ್ಮೀರಿ ಗೇಟ್‌ನಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿದ್ದ ರಾಜ್ ಕಲ್ಪನಾ ಟ್ರಾವೆಲ್ಸ್‌ ಬಸ್ ಬುಧವಾರ ತಡರಾತ್ರಿ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಕಿಗೆ ಸಿಲುಕಿದ್ದು, ಘಟನೆಯಲ್ಲಿ 9 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಡುವ ವಾಸನೆ ಬರುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು, ತಕ್ಷಣ ಬಸ್ ನಿಲ್ಲಿಸುವಂತೆ ಚಾಲಕನಿಗೆ ವಿನಂತಿಸಿದ್ದಾರೆ. ಆದರೆ, ಪ್ರಯಾಣಿಕರ ಮನವಿಗೆ ಕಿವಿಕೊಡದ ಚಾಲಕ ಮತ್ತು ನಿರ್ವಾಹಕ, ಕ್ಯಾಬಿನ್ ಒಳಗಡೆ ಧೂಮಪಾನ ಮಾಡುವುದನ್ನು ಮುಂದುವರಿಸಿದ್ದಲ್ಲದೆ, ಬಸ್ ನಿಲ್ಲಿಸಲು ನಿರಾಕರಿಸಿದ್ದಾರೆ ಎಂದು ಬದುಕುಳಿದ ಪ್ರಯಾಣಿಕರು ದಾಖಲಿಸಿರುವ ಎಫ್‌ಐಆರ್ (FIR) ನಲ್ಲಿ ತಿಳಿಸಲಾಗಿದೆ.

ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದ ಬಸ್ ಬೆಂಕಿಗೆ ಆಹುತಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಬಸ್ ನಿಲ್ಲಿಸಲು ನಿರಾಕರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಸ್‌ನಲ್ಲಿ ಸುಟ್ಟ ವಾಸನೆ ಬರುತ್ತಿದ್ದರೂ ಅದನ್ನು ನಿರ್ಲಕ್ಷಿಸಿ ಚಾಲಕ ಬಸ್ ಮುಂದುವರಿಸಿದ್ದು, ಬಳಿಕ ಚಾಲಕನ ಸೀಟಿನ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಹಮೀರ್‌ಪುರ ನಿವಾಸಿ ಸುನೀಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಜೇವರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರಾತ್ರಿ ಸುಮಾರು 9 ಗಂಟೆಗೆ ಕಾಶ್ಮೀರಿ ಗೇಟ್‌ನಿಂದ ಬಸ್ ಹೊರಟಾಗ ಅದರಲ್ಲಿ 30ರಿಂದ 35 ಪ್ರಯಾಣಿಕರಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ರಾತ್ರಿ ಸುಮಾರು 11.30ಕ್ಕೆ ಎಕ್ಸ್‌ಪ್ರೆಸ್‌ವೇನ 33ನೇ ಕಿಲೋಮೀಟರ್ ಬಳಿ ಬಸ್ ತಲುಪಿದಾಗ ಚಾಲಕನ ಕ್ಯಾಬಿನ್‌ನಿಂದ ಸುಟ್ಟ ವಾಸನೆ ಬರುತ್ತಿರುವುದನ್ನು ಪ್ರಯಾಣಿಕರು ಗಮನಿಸಿದ್ದರು. ಈ ಬಗ್ಗೆ ಚಾಲಕನಿಗೆ ತಿಳಿಸಿ ಬಸ್ ನಿಲ್ಲಿಸಿ ಪರಿಶೀಲಿಸುವಂತೆ ಮನವಿ ಮಾಡಿದ್ದರೂ, ಬಸ್‌ನಲ್ಲಿ ಇಂತಹ ವಾಸನೆ ಸಾಮಾನ್ಯ ಎಂದು ಹೇಳಿ ಚಾಲಕ ಬಸ್ ನಿಲ್ಲಿಸಲು ನಿರಾಕರಿಸಿದ್ದಾನೆ ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಚಾಲಕ ಹಾಗೂ ನಿರ್ವಾಹಕರು ಕ್ಯಾಬಿನ್‌ನಲ್ಲೇ ಬೀಡಿ ಮತ್ತು ಸಿಗರೇಟ್ ಸೇದುತ್ತಿದ್ದರು. ಬಳಿಕ ಚಾಲಕನ ಸೀಟಿನ ಸಮೀಪ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರು ಆತಂಕದಿಂದ ಬಸ್ ನಿಲ್ಲಿಸುವಂತೆ ಕೂಗಿದಾಗ, ಚಾಲಕ ಮತ್ತು ನಿರ್ವಾಹಕರು ‘ಸಾಯಬೇಕೆಂದರೆ ಸಾಯಿರಿ, ನಾವು ಬಸ್ ನಿಲ್ಲಿಸಲ್ಲ’ ಎಂದು ಹೇಳಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಸ್ ನಿಲ್ಲಿಸುವಷ್ಟರಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಕ್ಷಣಾರ್ಧದಲ್ಲಿ ಇಡೀ ಬಸ್ ಹೊಗೆಯಿಂದ ತುಂಬಿಕೊಂಡಿತ್ತು. ಬಳಿಕ ಸುನೀಲ್ ಕುಮಾರ್ ಸೇರಿದಂತೆ ಕೆಲ ಪ್ರಯಾಣಿಕರು ಬಸ್‌ನಿಂದ ಹೊರಗೆ ಜಿಗಿದು ಪಾರಾಗಿದ್ದಾರೆ. ಆದರೆ, ಹಲವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ, ಅಜಾಗರೂಕತೆ ಮತ್ತು ಅಪಾಯಕಾರಿಯಾಗಿ ವರ್ತಿಸಿದ ಆರೋಪಗಳನ್ನು ಚಾಲಕ ಮತ್ತು ನಿರ್ವಾಹಕರ ವಿರುದ್ಧ ಮಾಡಲಾಗಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರ ಸಾಮಾನು, ಮೊಬೈಲ್ ಫೋನ್‌ಗಳು ಹಾಗೂ ಲಗೇಜ್‌ ವಿಭಾಗ ಮತ್ತು ಬಸ್‌ನ ಮೇಲ್ಭಾಗದಲ್ಲಿದ್ದ ಇತರ ವಸ್ತುಗಳೂ ಬೆಂಕಿಯಲ್ಲಿ ಸಂಪೂರ್ಣವಾಗಿ ನಾಶವಾಗಿವೆ. ಅಲ್ಲದೆ, ಬೆಂಕಿಯಲ್ಲಿ ಗಾಯಗೊಂಡ ಹಲವು ಪ್ರಯಾಣಿಕರನ್ನು ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ 9 ಮಂದಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತಪಟ್ಟ 9 ಮಂದಿ ಸುಟ್ಟ ಗಾಯಗಳು ಹಾಗೂ ಹೊಗೆಯಿಂದ ಉಸಿರುಗಟ್ಟಿದ ಪರಿಣಾಮ ಸಾವನ್ನಪ್ಪಿದ್ದು, ಬಸ್ ಚಾಲಕ ಮತ್ತು ನಿರ್ವಾಹಕರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಜಲ ವಿವಾದ: ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಶಾಕ್; CWMA ಆದೇಶ ಪಾಲಿಸುವಂತೆ ಸೂಚನೆ, ಅ.12ಕ್ಕೆ ವಿಚಾರಣೆ ಮುಂದೂಡಿಕೆ..!

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಚಿನ್ನ ಮತ್ತು ಬೆಳ್ಳಿ, ಹೊಸ ಸೂಪರ್‌ ಸೈಕಲ್‌ನ ಆರಂಭವೇ? (ಹಣಕ್ಲಾಸು)