ನವದೆಹಲಿ: ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ನೋಟಿಸ್ ಪಡೆದಿದ್ದ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿದಂತೆ ದೇಶದ ಹಲವು ಪ್ರಮುಖ ಗಣ್ಯರ ಹೆಸರುಗಳನ್ನು ಕ್ಷೇತ್ರ ಪರಿಶೀಲನೆಯ (Field Verification) ನಂತರ ಚುನಾವಣಾ ಅಧಿಕಾರಿಗಳು ಅಂತಿಮವಾಗಿ ಅನುಮೋದಿಸಿದ್ದಾರೆ
ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿದ್ದ ಬಹುತೇಕ ಪ್ರಮುಖ ಮತದಾರರು ಕ್ಷೇತ್ರ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳನ್ನು ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನೋಟಿಸ್ ಪಡೆದ ಪ್ರಮುಖರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದ್ದಾರೆ.
ನ್ಯಾಯಾಂಗ, ರಾಜಕೀಯ, ಸಾರ್ವಜನಿಕ ಸೇವೆ, ಪತ್ರಿಕೋದ್ಯಮ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳ ಹಲವು ಪ್ರಮುಖ ವ್ಯಕ್ತಿಗಳಿಗೂ ಅವರ ಗಣತಿ ನಮೂನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು.
ಅಧಿಕಾರಿಗಳ ಪ್ರಕಾರ, ಈ ಪ್ರಮುಖ ಮತದಾರರ ಪೈಕಿ ಬಹುತೇಕರನ್ನು 2002ರಲ್ಲಿ ದೆಹಲಿಯಲ್ಲಿ ನಡೆದ ಹಿಂದಿನ ಎಸ್‌ಐಆರ್ ವೇಳೆ ಸಿದ್ಧಪಡಿಸಲಾಗಿದ್ದ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದವರು ಎಂದು ಗುರುತಿಸಲಾಗಿತ್ತು. ಇವರಲ್ಲಿ ಗಮನಾರ್ಹ ಸಂಖ್ಯೆಯ ಮತದಾರರು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ನೋಂದಾಯಿಸಿಕೊಂಡಿದ್ದರು.
ಕಳೆದ ಕೆಲವು ದಿನಗಳಿಂದ ಚುನಾವಣಾ ಅಧಿಕಾರಿಗಳ ತಂಡಗಳು, ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸಹಿತ, ಸಂಬಂಧಪಟ್ಟ ಮತದಾರರ ಮನೆಗಳಿಗೆ ತೆರಳಿ ಅವರ ವಿವರಗಳನ್ನು ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳೊಂದಿಗೆ ಪರಿಶೀಲಿಸಿವೆ.
ಪರಿಶೀಲನೆ ಪೂರ್ಣಗೊಂಡ ಬಳಿಕ ಅವರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲು ಕಾಯ್ದಿರಿಸಲಾಗಿದೆ. ಅಂತಿಮ ಪಟ್ಟಿ ನವೆಂಬರ್ 4ರಂದು ಪ್ರಕಟವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 31ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಈ ಮತದಾರರ ಹೆಸರುಗಳು ಕಾಣಿಸದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಚುನಾವಣಾ ಆಯೋಗದ ಸೂಚನೆಗಳಂತೆ, ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನೋಟಿಸ್‌ಗಳನ್ನು ನೀಡಲಾಗಿತ್ತು.
ದೆಹಲಿ ಎಸ್‌ಐಆರ್‌ನ ಕರಡು ಮತದಾರರ ಪಟ್ಟಿಯಲ್ಲಿ 97 ಲಕ್ಷಕ್ಕೂ ಅಧಿಕ ಮತದಾರರಿದ್ದು, ಗಣತಿ ನಮೂನೆಗಳಲ್ಲಿನ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಸುಮಾರು 33.13 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಗುರುತಿಸಲಾಗಿದೆ. ಈ ಪೈಕಿ ದೊಡ್ಡ ಪ್ರಮಾಣದ ಪ್ರಕರಣಗಳಲ್ಲಿ ಮತದಾರರ ವಿವರಗಳನ್ನು 2002ರ ಹಿಂದಿನ ಎಸ್‌ಐಆರ್ ವೇಳೆ ಸಿದ್ಧಪಡಿಸಲಾಗಿದ್ದ ಪಟ್ಟಿಯೊಂದಿಗೆ ಹೊಂದಿಸಲು ಸಾಧ್ಯವಾಗಿಲ್ಲ.
ಆದರೆ, ನೋಟಿಸ್ ನೀಡಿರುವುದರಿಂದ ಮಾತ್ರ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಲಾಗುತ್ತದೆ ಎಂದರ್ಥವಲ್ಲ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ.
ಮತದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡದೆ ಹಾಗೂ ಸೂಕ್ತ ಕಾರಣಸಹಿತ, ಮೇಲ್ಮನವಿ ಸಲ್ಲಿಸಬಹುದಾದ ಆದೇಶ ಹೊರಡಿಸದೆ ಯಾವುದೇ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.