ನವದೆಹಲಿ: ದಸರಾ-ದೀಪಾವಳಿ ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಲಿದ್ದು, ಅಕ್ಟೋಬರ್ 1ರಿಂದ AC, LED TV, ವಾಷಿಂಗ್ ಮಷಿನ್, ಫ್ರಿಜ್ ಸೇರಿದಂತೆ ಹಲವು ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಶೇ.5ರಿಂದ 8ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ದರ ಏರಿಕೆಗೆ ತಾಮ್ರ, ಅಲ್ಯೂಮಿನಿಯಂ, ಉಕ್ಕು, ಕಚ್ಚಾ ತೈಲದಿಂದ ತಯಾರಾಗುವ ಉತ್ಪನ್ನಗಳ ಬೆಲೆ ಏರಿಕೆ, ಸಾಗಣೆ ವೆಚ್ಚ ಹಾಗೂ ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತ ಇದಕ್ಕೆ ಪ್ರಮುಖ ಕಾರಣ ಎಂದು ಉದ್ಯಮ ವಲಯದ ಮೂಲಗಳು ತಿಳಿಸಿವೆ.
2026ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲಯನ್ಸ್ ಉದ್ಯಮದಲ್ಲಿ ನಡೆಯುತ್ತಿರುವ ಮೂರನೇ ಸುತ್ತಿನ ಬೆಲೆ ಏರಿಕೆ ಇದಾಗಿದ್ದು, ಪ್ರಮುಖ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹಲವು ಕಂಪನಿಗಳು ಹೇಳಿವೆ.
ಯಾವ ವಸ್ತುವಿನ ಎಷ್ಟು ಏರಿಕೆ?
ಏರ್ ಕಂಡಿಷನರ್‌ಗಳ ಬೆಲೆ ಶೇ.5ರಿಂದ 8ರವರೆಗೆ ಏರಿಕೆಯಾಗುವ ನಿರೀಕ್ಷೆಯಿದ್ದು, ಕೆಲವು ಕಂಪನಿಗಳು ವಾಷಿಂಗ್ ಮಷಿನ್, ಫ್ರಿಜ್ ಮತ್ತು LED TVಗಳ ಬೆಲೆಯನ್ನೂ ಶೇ.3ರಿಂದ 4ರವರೆಗೆ ಹೆಚ್ಚಿಸಲು ಮುಂದಾಗಿವೆ.
Blue Star, Godrej, Haier, Daikin ಹಾಗೂ Super Plastronics ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಶೇ.4ರಿಂದ 10ರವರೆಗೆ ವಿವಿಧ ಉತ್ಪನ್ನಗಳ ಬೆಲೆ ಹೆಚ್ಚಳವನ್ನು ಘೋಷಿಸಿವೆ ಅಥವಾ ಖಚಿತಪಡಿಸಿವೆ. Panasonic ಮಾತ್ರ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಬೆಲೆ ಏರಿಕೆ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ವರದಿಯಾಗಿದೆ.
ತಾಮ್ರ, ಉಕ್ಕು ಬೆಲೆ ಏರಿಕೆ
ಬ್ಲೂ ಸ್ಟಾರ್ ವ್ಯವಸ್ಥಾಪಕ ನಿರ್ದೇಶಕ ಬಿ. ತ್ಯಾಗರಾಜನ್ ಅವರ ಪ್ರಕಾರ, ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ AC ಮತ್ತು ಡೀಪ್ ಫ್ರೀಜರ್‌ಗಳ ಬೆಲೆ ಈಗಾಗಲೇ ಶೇ.5ರಿಂದ 8ರವರೆಗೆ ಹೆಚ್ಚಾಗಿದೆ. ಈ ವರ್ಷ ಕಂಪನಿ ಕೈಗೊಂಡಿರುವ ಮೂರನೇ ಬೆಲೆ ಏರಿಕೆ ಇದಾಗಿದೆ.
ಕಳೆದ ವರ್ಷದ ಹಬ್ಬದ ಸೀಸನ್‌ಗೆ ಹೋಲಿಸಿದರೆ ಉತ್ಪಾದನಾ ವೆಚ್ಚ ಸುಮಾರು ಶೇ.15ರಷ್ಟು ಹೆಚ್ಚಾಗಿದೆ. ಆದರೆ ಗ್ರಾಹಕರಿಗೆ ಲಭ್ಯವಾಗಿರುವ GST ಪ್ರಯೋಜನದಿಂದ ಒಟ್ಟಾರೆ ಪರಿಣಾಮ ಸುಮಾರು ಶೇ.5ರಷ್ಟು ಇರಬಹುದು ಎಂದು ಅವರು ಹೇಳಿದ್ದಾರೆ.
ಗೋದ್ರೆಜ್ ಎಂಟರ್‌ಪ್ರೈಸಸ್ ಗ್ರೂಪ್‌ನ ಅಪ್ಲಯನ್ಸಸ್ ವಿಭಾಗದ ಮುಖ್ಯಸ್ಥ ಕಮಲ್ ನಂದಿ ಮಾತನಾಡಿ, ಸರಕುಗಳ ಬೆಲೆ ಕಳೆದ ಪರಿಷ್ಕರಣೆಯಿಂದ ಶೇ.8ರಿಂದ 10ರವರೆಗೆ ಹೆಚ್ಚಾಗಿರುವುದರಿಂದ ಮತ್ತೊಂದು ಸುತ್ತಿನ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ.
ವಿವಿಧ ಉತ್ಪನ್ನಗಳ ಬೆಲೆ ಶೇ.5ರಿಂದ 7ರವರೆಗೆ ಹೆಚ್ಚಾಗಬಹುದು. ಕೆಲವು ಕಂಪನಿಗಳು ಅಕ್ಟೋಬರ್‌ನಿಂದ, ಇನ್ನೂ ಕೆಲವು ನವೆಂಬರ್‌ನಿಂದ ಹೊಸ ದರ ಜಾರಿಗೆ ತರಬಹುದು ಎಂದು ಅವರು ಹೇಳಿದ್ದಾರೆ.
ಹಳೆಯ ದರದಲ್ಲೇ ಖರೀದಿಗೆ ಅವಕಾಶ?
ಬೆಲೆ ಏರಿಕೆಯ ನಡುವೆಯೂ ಹಬ್ಬದ ಸೀಸನ್‌ನಲ್ಲಿ ಹಳೆಯ ದರದಲ್ಲೇ ಕೆಲವು ಉತ್ಪನ್ನಗಳು ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ. ಬೆಲೆ ಏರಿಕೆಗೆ ಮುನ್ನವೇ ಡೀಲರ್‌ಗಳು ಮತ್ತು ವಿತರಕರು ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿ ಸಂಗ್ರಹಿಸಿಕೊಂಡಿರುವುದೇ ಇದಕ್ಕೆ ಕಾರಣ.
ಈ ಹಳೆಯ ದರದ ಸ್ಟಾಕ್ ಸುಮಾರು ಒಂದು ತಿಂಗಳಿಂದ ಒಂದೂವರೆ ತಿಂಗಳವರೆಗೆ ಸಾಕಾಗಬಹುದು. ಹೀಗಾಗಿ ದೀಪಾವಳಿಯವರೆಗೂ ಹಳೆಯ ದರದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ದೀಪಾವಳಿ ನಂತರ ಹೊಸ ದರಗಳು ಸಂಪೂರ್ಣವಾಗಿ ಜಾರಿಗೆ ಬರಲಿವೆ ಎಂದು ಕಮಲ್ ನಂದಿ ಹೇಳಿದ್ದಾರೆ.
ಜನವರಿವರೆಗೆ ಪದೇ ಪದೇ ದರ ಏರಿಕೆ?
ಹೈಯರ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಎಸ್. ಸತೀಶ್ ಮಾತನಾಡಿ, ಅಕ್ಟೋಬರ್ 1ರಿಂದ ACಗಳ ಬೆಲೆಯನ್ನು ಸುಮಾರು ಶೇ.5ರಷ್ಟು ಹೆಚ್ಚಿಸಲು ಕಂಪನಿ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಇತರ ಉತ್ಪನ್ನಗಳಾದ LED TV ಮತ್ತು ವಾಷಿಂಗ್ ಮಷಿನ್‌ಗಳ ಬೆಲೆಯಲ್ಲೂ ಶೇ.2ರಿಂದ 3ರವರೆಗೆ ಹೆಚ್ಚಳವಾಗಬಹುದು.
ಮಾತ್ರವಲ್ಲದೇ ಇನ್‌ಪುಟ್ ವೆಚ್ಚಗಳು ಇದೇ ರೀತಿ ಮುಂದುವರಿದರೆ ದೀಪಾವಳಿ ನಂತರ ಹಾಗೂ ಜನವರಿಯಲ್ಲಿ ಮತ್ತಷ್ಟು ಬೆಲೆ ಏರಿಕೆ ಮಾಡುವ ಸಾಧ್ಯತೆಯಿದೆ. ಅಕ್ಟೋಬರ್‌ನಿಂದ ಜನವರಿವರೆಗೆ ಒಟ್ಟು ಸುಮಾರು ಶೇ.15ರಷ್ಟು ಬೆಲೆ ಹೆಚ್ಚಳವಾಗಬಹುದು ಎಂದು ಸತೀಶ್ ತಿಳಿಸಿದ್ದಾರೆ.
ವಿಶೇಷವಾಗಿ AC ತಯಾರಿಕೆಯಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿರುವ ತಾಮ್ರದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಕಳೆದ ವರ್ಷ ಪ್ರತಿ ಮೆಟ್ರಿಕ್ ಟನ್‌ಗೆ 8,000-9,000 ಡಾಲರ್ ಇದ್ದ ತಾಮ್ರದ ಬೆಲೆ ಈಗ ಸುಮಾರು 14,500 ಡಾಲರ್‌ಗೆ ತಲುಪಿದೆ. ಒಂದು AC ತಯಾರಿಸಲು ಸುಮಾರು 3ರಿಂದ 4 ಕೆಜಿ ತಾಮ್ರ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ದೀಪಾವಳಿ ಖರೀದಿಗೆ ಎಷ್ಟು ಪರಿಣಾಮ?
ಸಾಮಾನ್ಯವಾಗಿ ಓಣಂನಿಂದ ದಸರಾ ಹಾಗೂ ದೀಪಾವಳಿವರೆಗೆ ಇರುವ ಹಬ್ಬದ ಅವಧಿ ಅಪ್ಲಯನ್ಸ್ ತಯಾರಕರ ವಾರ್ಷಿಕ ಮಾರಾಟದಲ್ಲಿ ಸುಮಾರು 30ರಿಂದ 40 ಪ್ರತಿಶತ ಪಾಲು ಹೊಂದಿರುತ್ತದೆ. ಈಗಾಗಲೇ ಡೈಕಿನ್ ಇಂಡಿಯಾ ಈಗಾಗಲೇ ಸೆಪ್ಟೆಂಬರ್ 16ರಿಂದ ಬೆಲೆಗಳನ್ನು ಶೇ.8ರಿಂದ 10ರವರೆಗೆ ಹೆಚ್ಚಿಸಿದೆ.
ತಾಮ್ರದ ಬೆಲೆ ಸುಮಾರು ಶೇ.25ರಿಂದ 35ರಷ್ಟು ಏರಿಕೆಯಾಗಿದ್ದು, ಡಾಲರ್ ಬಲಗೊಳ್ಳುತ್ತಿರುವುದು ಹಾಗೂ ಇತರ ಸರಕುಗಳ ಬೆಲೆ ಏರಿಕೆ ಕಂಪನಿಗಳ ಮೇಲೆ ಒತ್ತಡ ಹೆಚ್ಚಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕನ್ವಲ್‌ಜೀತ್ ಜಾವಾ ಹೇಳಿದ್ದಾರೆ.
ಇನ್ನು ಥಾಮ್ಸನ್, ಕೊಡ್ಯಾಕ್ ಮತ್ತು ಬ್ಲಾಪಂಕ್ಟ್ ಬ್ರ್ಯಾಂಡ್‌ಗಳ TVಗಳನ್ನು ಮಾರಾಟ ಮಾಡುವ ಸೂಪರ್ ಪ್ಲಾಸ್ಟ್ರಾನಿಕ್ಸ್ ಅಕ್ಟೋಬರ್ ನಂತರ TV ಬೆಲೆಗಳನ್ನು ಸುಮಾರು ಶೇ.7ರಷ್ಟು ಹೆಚ್ಚಿಸಲು ಮುಂದಾಗಿದೆ. ಇತರ ಅಪ್ಲಯನ್ಸ್‌ಗಳ ಬೆಲೆ ಈಗಾಗಲೇ ಶೇ.4ರಿಂದ 5ರವರೆಗೆ ಏರಿಕೆಯಾಗಿದೆ.
ಮತ್ತೊಂದೆಡೆ, ಹೆಚ್ಚುತ್ತಿರುವ ಸಾಗಣೆ ವೆಚ್ಚ ಹಾಗೂ ಪೂರೈಕೆ ಸರಪಳಿ ಸಮಸ್ಯೆಗಳಿಂದ ದೀಪಾವಳಿ ನಂತರ TVಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಉದ್ಯಮ ವಲಯದವರು ಹೇಳಿದ್ದಾರೆ. ಸಣ್ಣ ಗಾತ್ರದ TVಗಳ ಬೆಲೆ ಶೇ.20ರವರೆಗೆ, ದೊಡ್ಡ ಗಾತ್ರದ TVಗಳ ಬೆಲೆ ಶೇ.10ರವರೆಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವಿಡಿಯೋಟೆಕ್ಸ್ ನಿರ್ದೇಶಕ ಅರ್ಜುನ್ ಬಜಾಜ್ ತಿಳಿಸಿದ್ದಾರೆ.