ನ್ಯೂಯಾರ್ಕ್: ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಇಂದು ಸುಧಾರಿಸಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದು, ಉಭಯ ದೇಶಗಳ ನಡುವೆ ಸಂಪೂರ್ಣ ಸಹಜ ಸ್ಥಿತಿ ಮರಳಬೇಕಾದರೆ ಗಡಿಯಲ್ಲಿ ನಿರಂತರ ಶಾಂತಿ ನೆಲೆಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಏಷ್ಯಾ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2020ರಲ್ಲಿ ಆರಂಭವಾದ ದೀರ್ಘಕಾಲದ ಗಡಿ ಬಿಕ್ಕಟ್ಟಿನಿಂದ ಉಭಯ ದೇಶಗಳ ಸಂಬಂಧಕ್ಕೆ ತೀವ್ರ ಹೊಡೆತ ಬಿದ್ದಿತ್ತು. ಆದರೆ, ಗಡಿಗೆ ಸಂಬಂಧಿಸಿದ ತಕ್ಷಣದ ಸಮಸ್ಯೆಗಳು ಬಗೆಹರಿದ ಬಳಿಕ ಸಂಬಂಧದಲ್ಲಿ ಸುಧಾರಣೆ ಆರಂಭವಾಗಿದೆ ಎಂದು ಹೇಳಿದರು.
2025ಕ್ಕೆ ಹೋಲಿಸಿದರೆ ಇಂದು ಸಂಬಂಧ ಉತ್ತಮವಾಗಿದೆಯೇ ಎಂದು ಕೇಳಿದರೆ, ಹೌದು ಎಂದು ಹೇಳುತ್ತೇನೆ. 2024ಕ್ಕೆ ಹೋಲಿಸಿದರೆ ಇನ್ನೂ ಹೆಚ್ಚು ಉತ್ತಮವಾಗಿದೆ ಎಂದು ಹೇಳಿದರು.
ಇದು ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಯಾವುದೇ ಮೂಲಭೂತ ಬದಲಾವಣೆಯ ಫಲಿತಾಂಶವಲ್ಲ. ಬದಲಾಗಿ, 2020ರ ಗಡಿ ಉದ್ವಿಗ್ನತೆಯ ಬಳಿಕ ತೀವ್ರವಾಗಿ ಹದಗೆಟ್ಟಿದ್ದ ಸಂಬಂಧ ಮತ್ತೆ ಸ್ಥಿರವಾಗುತ್ತಿರುವುದರ ಪರಿಣಾಮ ಎಂದು ವಿವರಿಸಿದರು.
2020ರ ಬಳಿಕ ಉಭಯ ದೇಶಗಳ ನಡುವೆ ದೀರ್ಘಕಾಲದ ಗಡಿ ಬಿಕ್ಕಟ್ಟು ಮುಂದುವರಿದಿದ್ದರಿಂದ ಸಾಮಾನ್ಯ ಸಂಪರ್ಕಗಳು ಬಹುತೇಕ ಸ್ಥಗಿತಗೊಂಡಿದ್ದವು. ವ್ಯಾಪಾರ ಮುಂದುವರಿದಿದ್ದರೂ, ಅಧಿಕೃತ ಮಾತುಕತೆಗಳು, ವೀಸಾ ವಿತರಣೆ ಮತ್ತು ವಿಮಾನ ಸೇವೆಗಳ ಮೇಲೂ ಪರಿಣಾಮ ಬೀರಿತ್ತು. ಗಡಿ ಬಿಕ್ಕಟ್ಟು ಶಮನಗೊಂಡ ಬಳಿಕ ಸಹಜವಾಗಿಯೇ ಈ ಸಂಪರ್ಕಗಳು ಮತ್ತೆ ಸುಧಾರಿಸಲು ಆರಂಭಿಸಿದವು.
ದೀರ್ಘಕಾಲದ ಉದ್ವಿಗ್ನತೆ ಭಾರತ ಅಥವಾ ಚೀನಾದ ಹಿತಾಸಕ್ತಿಗೆ ಅನುಕೂಲಕರವಲ್ಲ ಮತ್ತು ಇಂತಹ ಪರಿಸ್ಥಿತಿ ಮೂರನೇ ರಾಷ್ಟ್ರಗಳಿಗೆ ಅವಕಾಶ ಕಲ್ಪಿಸಬಹುದು ಎಂಬುದನ್ನು ಭಾರತ ನಿರಂತರವಾಗಿ ಚೀನಾಕ್ಕೆ ತಿಳಿಸುತ್ತಾ ಬಂದಿತ್ತು. ಇತರರಿಗೆ ಲಾಭವಾಗುವಂತಹ ಸಮಸ್ಯೆಯಲ್ಲಿ ನಾವು ಸಿಲುಕಿಕೊಳ್ಳಬಾರದು ಎಂಬುದು ನಮ್ಮ ರಾಜತಾಂತ್ರಿಕತೆಯ ಮೂಲ ತತ್ವ.
ಭಾರತ-ಚೀನಾ ಸಂಬಂಧದ ಕುರಿತು ಭಾರತದ ನಿಲುವು ಸ್ಪಷ್ಟವಾಗಿದೆ. ಗಡಿಯ ಸ್ಥಿತಿ ಹೇಗಿದೆಯೋ, ಅದರ ಆಧಾರದ ಮೇಲೆಯೇ ಒಟ್ಟಾರೆ ದ್ವಿಪಕ್ಷೀಯ ಸಂಬಂಧದ ಸ್ಥಿತಿಯೂ ನಿರ್ಧಾರವಾಗುತ್ತದೆ ಎಂದು ತಿಳಿಸಿದರು
ಗಡಿಯಲ್ಲಿ ಉದ್ವಿಗ್ನತೆ ಇರುವಾಗ ಸಂಬಂಧ ಸಾಮಾನ್ಯವಾಗಿರಬೇಕು ಎಂದು ಹೇಳಲು ಸಾಧ್ಯವಿಲ್ಲ. ಗಡಿ ಮತ್ತೆ ಸಹಜ ಸ್ಥಿತಿಯತ್ತ ಬಂದಂತೆ, ಎರಡೂ ದೇಶಗಳ ನಡುವಿನ ಸಂಬಂಧವೂ ಸಹಜ ಸ್ಥಿತಿಯತ್ತ ಮರಳುತ್ತದೆ ಎಂದು ಹೇಳಿದರು.
ಭಾರತ-ಚೀನಾ ನಡುವೆ ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದರು. 2024ರ ಬಳಿಕ ಉಭಯ ದೇಶಗಳು ಸಂಬಂಧವನ್ನು ಸ್ಥಿರಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿವೆ. ಆದಾಗ್ಯೂ, ಎರಡೂ ದೇಶಗಳ ನಡುವೆ ಹಲವು ಕಾರ್ಯತಂತ್ರದ ಭಿನ್ನಾಭಿಪ್ರಾಯಗಳು ಇನ್ನೂ ಮುಂದುವರಿದಿವೆ.