ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ನಿರ್ದೇಶನವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರನ್ನೊಳಗೊಂಡ ವಿಭಾಗೀಯ ಪೀಠ, ಮಾರ್ಚ್ 31, 2023 ರಂದು ಏಕ ಸದಸ್ಯ ಪೀಠ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ.
ಸಿಐಸಿಯ 2016 ರ ನಿರ್ದೇಶನವನ್ನು ರದ್ದುಗೊಳಿಸಿದ್ದ ಏಕ ಸದಸ್ಯ ಪೀಠ, ಕೇಜ್ರಿವಾಲ್ ಅವರಿಗೆ 25,000 ರೂ. ದಂಡ ವಿಧಿಸಿತ್ತು.
ಪ್ರಸ್ತುತ ಪ್ರಕರಣದ ಒಟ್ಟಾರೆ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ಇದರಲ್ಲಿ ಯಾವುದೇ ಯಾವುದೇ ದೋಷಗಳು ಕಂಡುಬರುವುದಿಲ್ಲ. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
2016ರಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸಿಐಸಿಗೆ ಪತ್ರ ಬರೆದು ಪ್ರಧಾನಿ ಮೋದಿ ಅವರ ಪದವಿ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದರು. ಅಂದಿನ ಸಿಐಸಿ ಎಂ. ಶ್ರೀಧರ್ ಆಚಾರ್ಯರು ಅವರು ಮೋದಿ ಪಡೆದ ಪದವಿಗಳ ಮಾಹಿತಿಯನ್ನು ಕೇರ್ಜಿರಾವ್ ಅವರಿಗೆ ನೀಡವಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು. ಇದನ್ನು ಪ್ರಶ್ನಿಸಿ, ಗುಜರಾತ್ ವಿಶ್ವವಿದ್ಯಾಲಯ ಹೈಕೋರ್ಟ್ ಮೆಟ್ಟಿಲೇರಿತ್ತು.