ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಬಯಸಿದ ಕಾಂಗ್ರೆಸ್ ಸಂಸದ Online Desk
ದೇಶ

ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಬಯಸಿದ ಕಾಂಗ್ರೆಸ್ ಸಂಸದ; FCRA ತಿದ್ದುಪಡಿ ಮಸೂದೆ ವಿರೋಧಿಸಲು ಜಾಗತಿಕ ನಾಯಕರಿಗೆ ಸಲೆಂಗ್ ಸಂಗ್ಮಾ ಮನವಿ

ಪ್ರಸ್ತಾವಿತ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ-2026 ಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಸಾಲೆಂಗ್ ಎ. ಸಂಗ್ಮಾ ಅವರು ವಿದೇಶಿ ಪ್ರತಿನಿಧಿಗಳ ಹಸ್ತಕ್ಷೇಪ ಹಾಗೂ ಬೆಂಬಲ ಕೋರಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ತುರಾ (ಮೇಘಾಲಯ): ಭಾರತಕ್ಕೆ ತನ್ನದೇ ಆದ ಸಾರ್ವಭೌಮ ಸಂವಿಧಾನವಿದೆ, ಸ್ವತಂತ್ರ ನ್ಯಾಯಾಂಗವಿದೆ ಮತ್ತು ಸದೃಢ ಕಾನೂನು ವ್ಯವಸ್ಥೆಯಿದೆ. ಆದರೆ ದೇಶದ ಆಂತರಿಕ ನಿರ್ಧಾರಗಳಿಗೂ ಹೊರಗಿನ ಶಕ್ತಿಗಳ ಹಸ್ತಕ್ಷೇಪ ಬೇಕೆಂಬ ಧೋರಣೆ ಮಾತ್ರ ಕಡಿಮೆ ಆಗಿಲ್ಲ. ಅದರಂತೆ, ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಪ್ರಸ್ತಾವಿತ ಮಸೂದೆಯನ್ನು ರದ್ದುಗೊಳಿಸಲು ಭಾರತ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕಾಂಗ್ರೆಸ್ ಸಂಸದರೊಬ್ಬರು ಆಗ್ರಹಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: 

ವಿವಾದದ ಹಿನ್ನೆಲೆ ಏನು?

ಕೇಂದ್ರ ಸರ್ಕಾರವು ತರಲು ಹೊರಟಿರುವ ಹೊಸ FCRA ತಿದ್ದುಪಡಿ ಮಸೂದೆ, 2026 ರ ಪ್ರಕಾರ, ಯಾವುದೇ ಎನ್‌ಜಿಒ, ಧಾರ್ಮಿಕ ಸಂಸ್ಥೆ, ಶಾಲೆ ಅಥವಾ ಆಸ್ಪತ್ರೆಗಳ FCRA ಲೈಸೆನ್ಸ್ ನವೀಕರಣಗೊಳ್ಳದಿದ್ದರೆ ಅಥವಾ ರದ್ದಾದರೆ, ಆ ಸಂಸ್ಥೆಗಳ ಆಸ್ತಿಪಾಸ್ತಿಗಳನ್ನು ಸರ್ಕಾರ ನೇಮಿಸುವ ನಿಯೋಜಿತ ಅಧಿಕಾರಿ ವಶಕ್ಕೆ ಪಡೆಯಬಹುದು ಎಂಬ ಕಠಿಣ ನಿಯಮವಿದೆ. ಈ ನಿಯಮದಿಂದಾಗಿ ಈಶಾನ್ಯ ಭಾರತದ (ವಿಶೇಷವಾಗಿ ಮೇಘಾಲಯದ) ಚರ್ಚ್‌ಗಳು, ಮಿಷನರಿ ಶಾಲೆಗಳು ಮತ್ತು ಸಮಾಜ ಕಲ್ಯಾಣ ಸಂಸ್ಥೆಗಳಿಗೆ ತೊಂದರೆಯಾಗಬಹುದು ಎಂದು ಅಲ್ಲಿನ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಈ ಮಸೂದೆಯನ್ನು ಪ್ರಸ್ತುತ ಜಂಟಿ ಸಂಸದೀಯ ಸಮಿತಿ ಪರಿಶೀಲಿಸುತ್ತಿದೆ.

ಇದರ ನಡುವೆಯೇ, ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಸಾಲೆಂಗ್ ಎ. ಸಂಗ್ಮಾ ಅವರು, "ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಮೆಕ್ಸಿಕೋ ಮತ್ತು ಕೆಲವು ಆಫ್ರಿಕನ್ ದೇಶಗಳ ಸಂಸದರು ಹಾಗೂ ಪ್ರತಿನಿಧಿಗಳನ್ನು ಸಂಪರ್ಕಿಸಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ತರಲು ಹೊರಟಿರುವ ಹೊಸ FCRA ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಅಥವಾ ಅದನ್ನು ಮರುಪರಿಶೀಲಿಸುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಅಪೀಲು ಸಲ್ಲಿಸುವಂತೆ ಮತ್ತು ಭಾರತದ ಜನರಿಗಾಗಿ ಪ್ರಾರ್ಥಿಸುವಂತೆ" ವಿನಂತಿಸಿರುವುದಾಗಿ ತಿಳಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, "ಭಾರತದ ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ದೇಶದ ಆಂತರಿಕ ಕಾನೂನೊಂದರ ವಿರುದ್ಧ ವಿದೇಶಿ ಶಕ್ತಿಗಳನ್ನು ಎತ್ತಿಕಟ್ಟುತ್ತಿರುವುದು ದೇಶದ್ರೋಹದ ಕೆಲಸ" ಎಂದು ಆರೋಪಿಸಿದೆ. ಇದರೊಂದಿಗೆ, ಭಾರತದ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಸಾರ್ವಭೌಮತ್ವವನ್ನು ಕಾಂಗ್ರೆಸ್ ಸಂಸದರು ವಿದೇಶಿ ನಾಯಕರ ಮುಂದೆ ಅಡವಿಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿದ ಸಾಲೆಂಗ್ ಸಂಗ್ಮಾ, "ನಾನು ಭಾರತದ ಆಂತರಿಕ ವಿಷಯದಲ್ಲಿ ವಿದೇಶಿಯರು ಮೂಗು ತೂರಿಸಬೇಕೆಂದು ಕೇಳುತ್ತಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಒಳ್ಳೆಯ ಸಂಬಂಧಗಳಿವೆ. ಹಾಗಾಗಿ ಈ ಕಾನೂನಿನಿಂದ ದೇಶದ ಲಕ್ಷಾಂತರ ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರಕ್ಕೆ ಕೇವಲ ಮನವಿ ಸಲ್ಲಿಸುವಂತೆ ಮಾತ್ರ ವಿದೇಶಿ ನಾಯಕರಲ್ಲಿ ಕೇಳಿಕೊಂಡಿದ್ದೇನೆ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಏನಿದು FCRA ತಿದ್ದುಪಡಿ ಮಸೂದೆ 2026?

ಕೇಂದ್ರ ಸರ್ಕಾರವು ವಿದೇಶಗಳಿಂದ ಭಾರತಕ್ಕೆ ಬರುವ ಧನಸಹಾಯ ಹಾಗೂ ದೇಣಿಗೆಗಳು ದುರ್ಬಳಕೆಯಾಗದಂತೆ ತಡೆಯಲು ಮತ್ತು ಅದರಲ್ಲಿ ಪಾರದರ್ಶಕತೆ ತರಲು ಈ ಹೊಸ ತಿದ್ದುಪಡಿಯನ್ನು ತರುತ್ತಿದೆ. ವಿದೇಶಿ ಹಣವು ದೇಶದ ಭದ್ರತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಅಥವಾ ಕಾನೂನುಬಾಹಿರ ಮತಾಂತರಗಳಿಗೆ ಬಳಕೆಯಾಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶ ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಪ್ರಕ್ರಿಯೆ ಪೂರ್ಣಗೊಂಡ ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಲ್ಲಿ ಫಾರ್ಮ್-6 ರದ್ದು: ಕೇಂದ್ರ ಚುನಾವಣಾ ಆಯೋಗ

ಪೈಲಟ್‌ಗಳ ನಡುವೆ ಜಗಳ, ಹೈಜಾಕ್ ಅಲರ್ಟ್; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್: ಆಗಿದ್ದೇನು?

ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ಕ್ಕೆ ಸರ್ಕಾರ ಸಿದ್ಧತೆ!

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

ಮರುತನಿಖೆಗೂ ಮುನ್ನ ಸೌಜನ್ಯ ಪ್ರಕರಣಕ್ಕೆ ಹಿನ್ನಡೆ: SIT ತಂಡದಿಂದ ಕೈಬಿಡುವಂತೆ ಎಎಸ್ ಪಿ ಪತ್ರ