ಮಂಡ್ಯದ ಗಂಡು ಯಾರ್ಲಾ?
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 4ರಲ್ಲಿ ಜೆಡಿಎಸ್, 2ರಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಿದ್ದಾರೆ. ಈ ಬಾರಿಯ ಗೆಲವಿನ ಸಿಹಿ ಸವಿಯಲು ತಯಾರಿ ಹೇಗಿದೆ ಎಂಬುದರ ವಿವರ ಇಲ್ಲಿದೆ...
ಮದ್ದೂರು 'ಜಯದ ವಡೆ' ಯಾರಿಗೆ?
ಮದ್ದೂರು ಕ್ಷೇತ್ರದ ಹಾಲಿ ಶಾಸಕಿ ಜೆಡಿಎಸ್‌ನ ಕಲ್ಪನಾ ಸಿದ್ದರಾಜು. ಈ ಬಾರಿಯೂ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಆದರೆ, ಬಿಜೆಪಿ ಬಿಟ್ಟು ಜೆಡಿಎಸ್ ಸೇರಿರುವ ಡಿ.ಸಿ. ತಮ್ಮಣ್ಣ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾಗಿ ಕಲ್ಪನಾ ಸಿದ್ದರಾಜು ಪಕ್ಷಾಂತರ ಮಾಡಿದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್‌ನಿಂದ 'ರಾಜ್ಯ'ಕಾರಣಕ್ಕೆ ಮರಳಿರುವ ಎಸ್.ಎಂ. ಕೃಷ್ಣ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಅವರು ಕಣಕ್ಕಿಳಿಯದಿದ್ದರೆ ಮಾಜಿ ಶಾಸಕ ಮಧು ಮಾದೇಗೌಡ, ಗುರುಚರಣ್, ವಿವೇಕಾನಂದ ಅವರು ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯಲಿದೆ. ಬಿಜೆಪಿಯಿಂದ ದಿ. ಮಂಚೇಗೌಡರ ಪುತ್ರ ಸ್ವರೂಪ್‌ಚಂದ, ಕೆ.ಎಂ. ರಮೇಶ ನಡುವೆ ಪೈಪೋಟಿ ಇದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಪ್ರವೀಣ, ರೈತಸಂಘದಿಂದ ಅಶೋಕ ಸ್ಪರ್ಧಿಸುವ ಸಾಧ್ಯತೆ ಇದೆ.
ಯಾರಿಗೆ ಶ್ರೀರಂಗ'ಪಟ್ಟ'ಣ?
ಶ್ರೀರಂಗಪಟ್ಟಣದ ಹಾಲಿ ಶಾಸಕ ಜೆಡಿಎಸ್‌ನ ರಮೇಶಬಾಬು ಬಂಡಿಸಿದ್ದೇಗೌಡ. ಈ ಬಾರಿಯೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ, ತಗ್ಗಹಳ್ಳಿ ವೆಂಕಟೇಶ ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕಣಕ್ಕಿಳಿಸುವ ಚರ್ಚೆ ನಡೆಯುತ್ತಿದೆ. ಆದರೆ, ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ ಅವರ ಪುತ್ರ ರವೀಂದ್ರ ಶ್ರೀಕಂಠಯ್ಯ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ರವೀಂದ್ರ ಅವರು ಎಸ್.ಎಂ. ಕೃಷ್ಣ ಅವರ ಪ್ರಭಾವ ಬಳಸಿ ಲಾಭಿ ನಡೆಸುತ್ತಿದ್ದು ಎಲ್ಲವೂ ಗೊಂದಲಮಯವಾಗಿದೆ. ರೈತ ಸಂಘದಿಂದ ಕೆಜೆಪಿ ಬೆಂಬಲ ಪಡೆದು ನಂಜುಂಡೇಗೌಡ ಅವರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬಿಜೆಪಿಯಿಂದ ಎಂ.ಸಂತೋಷ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಮಳವಳ್ಳಿ: ಚಿಗುರೀತೆ ಜಯದ ಬಳ್ಳಿ?
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮಳವಳ್ಳಿ ಕ್ಷೇತ್ರದ ಹಾಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ (ಪಕ್ಷೇತರ). ಕಳೆದ ಬಾರಿ ಕಾಂಗ್ರೆಸ್‌ನಿಂದ ಬಂಡೆದ್ದು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಬಳಿಕ ಬಿಜೆಪಿಗೆ ಬೆಂಬಲ ನೀಡಿದ್ದರು. ಈಗ ಮತ್ತೆ ಕಾಂಗ್ರೆಸ್ ಮರಳಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕಿ ಮಲ್ಲಾಜಮ್ಮ, ಅಮರನಾಥ್, ಡಾ.ಮೂರ್ತಿ, ಯಮದೂರು ಸಿದ್ದರಾಜು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ಡಾ.ಅನ್ನದಾನಿ ಹೆಸರು ಕೇಳಿ ಬರುತ್ತಿದೆ. ಕೆಜೆಪಿಯಿಂದ ಮುನಿರಾಜು ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಯು ನಾಯಕ ಬಿ. ಸೋಮಶೇಖರ್ ಕೆಜೆಪಿ ಮೈತ್ರಿಗೆ ಓಡಾಡುತ್ತಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ಸೋತಿದ್ದ ಕಲ್ಕುಣಿ ಮಹದೇವು ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಈ ಬಾರಿ ಅವರ ಪುತ್ರ ಸುಹಾಸ್ ಕುಲ್ಕಣಿ ಸ್ಪರ್ಧಿಸುವ ಸಾಧ್ಯತೆ ಇದೆ.
ಮೇಲುಕೋಟೆ ಯಾರ ಕೈ ಮೇಲು?
ರಾಮಾನುಜಾಚಾರ್ಯರ ತಪೋಭೂಮಿ ಸ್ಮರಣೆಗಾಗಿ ರೂಪಿಸಿರುವ ಮೇಲುಕೋಟೆ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಪುಟ್ಟರಾಜು. ಹ್ಯಾಟ್ರಿಕ್ ಗೆಲವಿಗಾಗಿ ಈ ಬಾರಿಯೂ ಅವರೇ ಹುರಿಯಾಳು. ರೈತ ಸಂಘದಿಂದ ಪುಟ್ಟಣ್ಣಯ್ಯ ಸ್ಪರ್ಧೆ ಬಹುತೇಕ ಖಚಿತ. ಹೀಗಾಗಿ ಪುಟ್ಟಣ್ಣಯ್ಯ, ಪುಟ್ಟರಾಜು ಕದನ ಗ್ಯಾರಂಟಿ. ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದ ಕಾಂಗ್ರೆಸ್‌ನಿಂದ ಈ ಬಾರಿ ಅಂಬರೀಷ್ ಶಿಷ್ಯ ಎಂ.ಡಿ. ರವಿ ಸ್ಪರ್ಧಿಸುವ ಸಾಧ್ಯತೆ ಇದೆ. ಜತೆಗೆ ದಿ. ಮಾಜಿ ಶಾಸಕ ಹಲಗೇಗೌಡ ಅವರ ಪುತ್ರ ಮಂಜುನಾಥ, ಸಿ.ಡಿ. ಗಂಗಾಧರ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಕಾಡೇನಹಳ್ಳಿ ನಾಗಣ್ಣಗೌಡ, ಜಿ.ಎಂ. ರವೀಂದ್ರ, ಎಚ್.ಎನ್. ಮಂಜುನಾಥ ಹೆಸರು ಕೇಳಿ ಬರುತ್ತಿವೆ. ಕೆಜೆಪಿ ರೈತ ಸಂಘದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿಲ್ಲ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ಮಂಡ್ಯದ ಸಿಹಿ ಕಬ್ಬು ಯಾರಿಗೆ?
ಮಂಡ್ಯ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಎಂ. ಶ್ರೀನಿವಾಸ. ಈ ಬಾರಿಯೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ, ಮಾಜಿ ಸಚಿವ ಅಶೋಕ್ ಜಯರಾಂ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಆಟೋ ನಾಗರಾಜು, ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ಎಚ್.ಬಿ. ರಾಮು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ಅಂಬರೀಷ್, ಮಾಜಿ ಸಚಿವ ಆತ್ಮಾನಂದ, ಎಂ.ಬಿ.ಶ್ರೀಕಾಂತ್, ರಾಮಲಿಂಗೇಗೌಡ ಹೆಸರು ಕೇಳಿ ಬರುತ್ತಿವೆ. ಆದರೆ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ಬಿಜೆಪಿಯಿಂದ ವಿದ್ಯಾನಾಗೇಂದ್ರ, ಎಚ್.ಪಿ.ಮಹೇಶ್ ಆಕಾಂಕ್ಷಿಗಳು. ಕೆಜೆಪಿ ಇನ್ನೂ ಸಂಘಟನಾ ಹಂತದಲ್ಲಿದ್ದು ಪ್ರೇಮ ಯುವರಾಜ್ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಎಸ್‌ಆರ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
'ನಾಗ'ಮಂಗಲ: ಹೆಡೆ ಬಿಚ್ಚುವರಾರು?
ನಾಗಮಂಗಲ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ಸುರೇಶ್‌ಗೌಡ. ಈ ಬಾರಿಯೂ ಅವರೇ ಸ್ಪರ್ಧಿಸುವ ಸಾಧ್ಯತೆ ಇದೆ. ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಅವರು ಕೂಡ ಸುರೇಶಗೌಡ ಅವರನ್ನೇ ಬೆಂಬಲಿಸಲು ನಿರ್ಧರಿಸಿದ್ದಾರೆ. ಆದರೆ, ಅವರ ಪುತ್ರ ಚೇತನಗೌಡ ತಂದೆಯ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾನೇ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಸೋತ ನಂತರ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಚೆಲುವರಾಯಸ್ವಾಮಿ ಈ ಬಾರಿ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತ. ಬಿಜೆಪಿಯಿಂದ ಎನ್.ಜೆ. ರಾಜೇಶ್ ಟಿಕೆಟ್ ಆಕಾಂಕ್ಷಿ. ಕೆಜೆಪಿಯಿಂದ ಟಿ.ಕೃಷ್ಣಪ್ಪ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ಕೆ.ಆರ್.ಪೇಟೆಯಲ್ಲಿ ಮತ ಸಂತೆ!
ಕೆ.ಆರ್.ಪೇಟೆ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ಬಿ. ಚಂದ್ರಶೇಖರ. ಈ ಬಾರಿಯೂ ಸ್ಪರ್ಧಿಸಲು ತಯಾರಾಗಿದ್ದು, ಇನ್ನೊಬ್ಬ ಆಕಾಂಕ್ಷಿ ಕಿಕ್ಕೇರಿ ಸುರೇಶ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ನಿಂದ ಮಾಜಿ ಸ್ಪೀಕರ್ ಕೃಷ್ಣ, ವಕೀಲ ಬಿ.ಎಲ್. ದೇವರಾಜು, ಮಾಜಿ ಶಾಸಕ ಬಿ. ಪ್ರಕಾಶ್, ಕೆ.ಸಿ. ನಾರಾಯಣಗೌಡ ಹೆಸರು ಕೇಳಿ ಬರುತ್ತಿವೆ. ಕೆಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೋದರಿಯ ಪುತ್ರ ಅರವಿಂದ್ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕೆ.ಮುರುಳೀಧರ್, ಬಿಜೆಪಿಯಿಂದ ಕುರುಬ ಜನಾಂಗದ ಹಿರಿಯ ನಾಯಕ ಕೆ.ಶ್ರೀನಿವಾಸ್, ರೈತ ಸಂಘದಿಂದ ನಂದಿನಿ ಜಯರಾಂ ಅಥವಾ ಮುದುಗೆರೆ ರಾಮೇಗೌಡರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.