ನಾನು ರಾಜಿನಾಮೆ ಕೊಟ್ಟಿಲ್ಲ: ಡೀವಿ
ಪುತ್ತೂರು: ವಿಧಾನ ಪರಿಷತ್ ಸದಸ್ಯನಾಗಿರುವ ನಾನು ಈ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ರಾಜಿನಾಮೆ ನೀಡಿದ್ದೇನೆ ಎಂದು ಹಬ್ಬಿರುವ ವದಂತಿಯಲ್ಲಿ ಯಾವುದೇ ಹುರುಳಿಲ್ಲ. ನನ್ನ ರಾಜಕೀಯದ ಶಕ್ತಿ ಕುಂದಿಸಲು ಯತ್ನಿಸುತ್ತಿರುವವರು ಈ ರೀತಿ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿದ್ದಾರೆ. ಶನಿವಾರ ಪತ್ತೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪಕ್ಷದಲ್ಲಿ ಒಬ್ಬ ಶಿಸ್ತಿನ ಸಿಪಾಯಿ. ನನ್ನ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಪಕ್ಷದ ನಾಯಕರು. ನನ್ನ ವೈಯುಕ್ತಿಕ ನಿರ್ಧಾರದ ಪ್ರಶ್ನೆಯೇ ಇರುವುದಿಲ್ಲ. ನನ್ನ ರಾಜಕೀಯ ಶಕ್ತಿಯನ್ನು ಧಮನಿಸುವುದಕ್ಕಾಗಿ ಇಂಥ ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಗಾಳಿ ಸುದ್ದಿಗಳ ಬಗ್ಗೆ ತಾನು ತಲೆಕಡೆಸಿಕೊಳ್ಳುವುದಿಲ್ಲ ಎಂದರು.