ಸಿಎಂ ಶೆಟ್ಟರ್ ಬೇನಾಮಿ ಆಸ್ತಿ
ಹುಬ್ಬಳ್ಳಿ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬೇನಾಮಿ ಆಸ್ತಿ ಮಾಡಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರವೆಸಗಿದ್ದಾರೆ. ಕೂಡಲೇ ಅವರು ಆಸ್ತಿ ಘೋಷಣೆ ಮಾಡಿ ನಿಜಾಂಶವನ್ನು ಜನತೆ ಮುಂದಿಡಬೇಕೆಂದು ಧಾರವಾಡ ಜಿಲ್ಲಾ ನಾಗರಿಕರ ಹಿತರಕ್ಷಕರ ವೇದಿಕೆಯ ಪದಾಧಿಕಾರಿಗಳಾದ ಮನೋಜ್ ಹಾನಗಲ್ ಹಾಗೂ ಅರವಿಂದ ಮೇಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೆಟ್ಟರ್ 2004ರಲ್ಲಿ ಘೋಷಿಸಿರುವ ಆಸ್ತಿಯ ಒಟ್ಟು ಮೌಲ್ಯ 64 ಲಕ್ಷ. 2008ರ ವಿಧಾನಸಭೆ ಚುನಾವಣೆ ವೇಳೆಗೆ ಅವರ ಆಸ್ತಿ 1.29 ಕೋಟಿಗೆ ಮುಟ್ಟಿತ್ತು. ಇದೀಗ ಈ ಆಸ್ತಿ ನೂರಾರು ಕೋಟಿಗೆ ತಲುಪಿರುವ ಸಾಧ್ಯತೆ ಇದೆ. ಈ ಆಸ್ತಿ ಇದ್ದಕ್ಕಿದ್ದಂತೆ ಬೆಳೆಯುತ್ತಾ ಹೋಗಿದ್ದು ಹೇಗೆ? ಭ್ರಷ್ಟಾಚಾರದಲ್ಲಿ ತೊಡಗಿದ ಶೆಟ್ಟರ್ ಅಧಿಕಾರ ಬಲದಿಂದ ತಮ್ಮ ಹಾಗೂ ಸಂಬಂಧಿಕರ ಹೆಸರಲ್ಲಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದರು.
2008ರ ಚುನಾವಣೆ ವೇಳೆಗೆ ಶೆಟ್ಟರ್ ಅವರ ಮಗನ ಖಾತೆಯಲ್ಲಿ 11.35 ಲಕ್ಷ ಇರುವುದಾಗಿ ತೋರಿಸಲಾಗಿತ್ತು. ಹೀಗಿದ್ದಾಗ ಶೆಟ್ಟರ್ ಮಗನ ಆದಾಯದ ಮೂಲ ಯಾವುದು? ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರು. ಬೆಲೆ ಬಾಳುವ ಹವಾ-ವಾಲ್ವ್ಸ್ ಎಂಬ ಕೋರ್ ಎಂಜಿನಿಯರಿಂಗ್ ಕಾರ್ಖಾನೆ ಸ್ಥಾಪಿಸಿದ್ದು, ಇವರ ಹಣಕಾಸಿನ ಮೂಲ ಯಾವುದು? ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೊಂದಿರುವ ಮನೆಯ ಮೌಲ್ಯ ಕೇವಲ 29 ಲಕ್ಷ ಎಂದು ಘೋಷಿಸಲಾಗಿದೆ. ಇದೇ ವೇಳೆ ಹಳೇ ಹುಬ್ಬಳ್ಳಿಯ ವಾಣಿಜ್ಯ ಕಟ್ಟದ ಮೌಲ್ಯ 4 ಲಕ್ಷವೆಂದು ಹಾಗೂ ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದ ಮೌಲ್ಯ 40 ಲಕ್ಷವೆಂದು ತೋರಿಸಿರುವುದು ಆಧಾರ ರಹಿತವಾಗಿದೆ ಎಂದರು.
ಕಾನೂನು ಉಲ್ಲಂಘನೆ: ಮುಖ್ಯಮಂತ್ರಿಗಳ ಸಹೋದರ ಸಂಬಂಧಿ (ಚಿಕ್ಕ ಅಳಿಯ) ಆದರ್ಶ ನಾಶಿ ಅಮರಗೋಳ ಗ್ರಾಮದ ಕಲ್ಲಪ್ಪ ತಳವಾಯಿ ಎಂಬವರಿಂದ 2008ರಲ್ಲಿ ಸರ್ವೆ ನಂ. 288/3ರ 5.35 ಎಕರೆ ಜಮೀನನ್ನು 1 ಕೋಟಿಗೆ ಖರೀದಿಸಿದ್ದಾರೆ. ಈ ಜಮೀನು ಕೆಎಚ್ಬಿಯಿಂದ ಸರ್ಕಾರದ ಅಧಿಸೂಚನೆ 4/1ನ್ನು ಭೂ ಸ್ವಾಧೀನ ಸಲುವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಭೂ ಸ್ವಾಧೀನಕ್ಕೆ ಒಳಪಟ್ಟ ಜಮೀನನ್ನು ಸರ್ಕಾರಿ ನಿಯಮದ ಪ್ರಕಾರ ಖರೀದಿಸಲು ಬರುವುದಿಲ್ಲ. ಇಲ್ಲಿ ಅಧಿಕಾರದ ಪ್ರಭಾವ ಬಳಸಿ ಜಿಲ್ಲಾಧಿಕಾರಿಯಾಗಿದ್ದ ದರ್ಪಣ್ ಜೈನ್ ಅವರಿಂದ ಕಾನೂನಿಗೆ ವಿರುದ್ಧವಾಗಿ ಭೂ ಪರಿವರ್ತಿಸಲಾಗಿದೆ. ಅಲ್ಲದೆ, ಪರಿವರ್ತನ ಶುಲ್ಕ ಮತ್ತು ಘೋಡಿ ಫೀ ಪಾವತಿಸಿ ಭೂ ಸ್ವಾದೀನದಿಂದ ಕೈಬಿಡುವ ಪ್ರಸ್ತಾವನೆಯನ್ನು ಶೆಟ್ಟರ್ ಮಾಡಿಸಿದ್ದಾರೆ ಎಂದರು.
15 ದಿನಗಳೊಳಗೆ ಉತ್ತರಿಸಲಿ: ಈ ಎಲ್ಲ ಆರೋಪಗಳಿಗೆ ಉತ್ತರಿಸುವ ಜತೆಗೆ 15 ದಿನಗಳೊಳಗಾಗಿ ಆಸ್ತಿ ಘೋಷಿಸಬೇಕು. ಇಲ್ಲದಿದ್ದಲ್ಲಿ ಶೆಟ್ಟರ್ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಲಾಗುವುದು. ಆರ್ಎಸ್ಎಸ್ ಕೂಡ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ಶೆಟ್ಟರ್ ಅವರಿಗೆ ಆಸ್ತಿ ಘೋಷಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.
'ಆಸರೆ' ಅವ್ಯವಹಾರ
ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಆಸರೆ ಮನೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ಮನೆಗಳು ಅತ್ಯಂತ ಕಳಪೆ ಮಟ್ಟದ್ದಾಗಿವೆ. ಆಸರೆ ಮನೆ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಸಿಎಂ ಶೆಟ್ಟರ್ ಅವರ ಮಿತ್ರರೊಬ್ಬರು ಪಡೆದುಕೊಂಡಿದ್ದಾರೆ. ಕಳಪೆ ಕಾಮಗಾರಿ ತನಿಖೆಗೆ ಒತ್ತಾಯಿಸಿದರೂ ಶೆಟ್ಟರ್ ಮಿತ್ರ ಎನ್ನುವ ಕಾರಣಕ್ಕೆ ತನಿಖೆ ನಡೆಯುತ್ತಿಲ್ಲ. ಜಲ್ಲಿ ಕ್ರಷರ್ ನಡೆಸಬಾರದು ಎಂಬ ಸುಪ್ರೀ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಜಲ್ಲಿ ಕ್ರಷರ್ನ್ನು ಜಿಲ್ಲಾಡಳಿತ ಬಂದ್ ಮಾಡಿಸಿದೆ. ಆದರೆ, ಸಿಎಂಗೆ ಬೇಕಾದವರೊಬ್ಬರು ಮನಸ್ಸೂರ್ನಲ್ಲಿ ಜಲ್ಲಿ ಕ್ರಷರ್ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಇದನ್ನು ನಿಲ್ಲಿಸಲು ಮುಂದಾಗಿಲ್ಲ. ಇದು ಕೋರ್ಟ್ ಆದೇಶ ಸ್ಪಷ್ಟವಾಗಿ ಉಲ್ಲಂಘಿಸಿದಂತಾಗುತ್ತದೆ. ಜಿಲ್ಲಾಡಳಿತದ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.