ಇನ್ನೆರಡು ದಿನದಲ್ಲಿ ಸರ್ಕಾರದ ಭವಿಷ್ಯ ನಿರ್ಧಾರ
ಬೆಂಗಳೂರು: ಶಾಸಕರ ರಾಜಿನಾಮೆಯಿಂದ ದಿಕ್ಕೆಟ್ಟಿರುವ ಬಿಜೆಪಿ ಸರ್ಕಾರದ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ. ಕಾಂಗ್ರೆಸ್ಗೆ ಸೇರುವ ಉದ್ದೇಶದಿಂದ ಕೆಲವು ಶಾಸಕರು ರಾಜಿನಾಮೆ ನೀಡುತ್ತಿದ್ದಂತೆ, ಇತ್ತ ಕೆಜೆಪಿಗೆ ಹೋಗಲು ಮುಂದಾಗಿರುವ ಕೆಲವು ಶಾಸಕರೂ ರಾಜಿನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸರ್ಕಾರ ಉಳಿಸಿಕೊಳ್ಳಬೇಕೇ ಅಥವಾ ವಿಧಾನಸಭೆ ವಿಸರ್ಜಿಸಿ ಹಂಗಾಮಿ ಆಡಳಿತ ಮುಂದುವರಿಸಬೇಕೇ ಎಂಬ ಬಗ್ಗೆ ಆಡಳಿತಾರೂಢ ಬಿಜೆಪಿಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.
ಬಿಜೆಪಿ ಸದಸ್ಯ ಬಲ 100ಕ್ಕಿಂತ ಕಡಿಮೆಯಾದರೆ ವಿಧಾನಸಭೆ ವಿಸರ್ಜಿಸಬೇಕು ಎಂದು ಕೆಲವರ ವಾದವಾದರೆ, ಜೆಡಿಎಸ್ ಬೆಂಬಲ ಪಡೆದು ಸಾಧ್ಯವಾದಷ್ಟು ದಿನ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬುದು ಇನ್ನು ಕೆಲವರ ಅಭಿಪ್ರಾಯ.
ಈ ಪೈಕಿ ಎರಡನೇ ಅಭಿಪ್ರಾಯಕ್ಕೇ ಹೆಚ್ಚು ಬೆಂಬಲವಿದೆ. ಹೀಗಾಗಿಯೇ ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಸರ್ಕಾರ ಉರುಳುತ್ತದೆ ಎಂಬ ಭೀತಿಯೊಂದಿಗೆ ಸಚಿವರು ತಮ್ಮ ಇಲಾಖೆಯ ಕೆಲಸ, ಬಾಕಿ ಬಿಲ್ಗಳ ಪಾವತಿ ಕುರಿತಂತೆ ತರಾತುರಿ ಮಾಡುತ್ತಿಲ್ಲ ಎನ್ನಲಾಗಿದೆ.
ಆದರೆ, ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತಂತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಈ ಸಂಪುಟ ಸಭೆಯ ಬಳಿಕ ಎಲ್ಲಾ ಸಚಿವರು ತಮ್ಮ ಇಲಾಖೆಗಳ ಬಿಲ್ ಪಡೆದುಕೊಳ್ಳುವ ಬಗ್ಗೆ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭೆ ವಿಸರ್ಜಿಸುವುದು ಸೂಕ್ತ: ಮೂಲಗಳ ಪ್ರಕಾರ ಸಂಘ ಪರಿವಾರ ಮೂಲದಿಂದ ಬಂದಿರುವ ಕೆಲವು ಬಿಜೆಪಿ ಶಾಸಕರು ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ವಿಧಾನಸಭೆ ವಿಸರ್ಜಿಸುವುದೇ ಸೂಕ್ತ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರೂ ಇದಕ್ಕೆ ದನಿಗೂಡಿಸಿದ್ದು, ಸಂಘ ಪರಿವಾರದಿಂದಲೂ ಇದೇ ಸಲಹೆ ವ್ಯಕ್ತವಾಗಿದೆ.
ಈ ಹಿಂದೆ ಒಮ್ಮೆ ಜೆಡಿಎಸ್ ಸಹವಾಸ ಮಾಡಿ ಕೈಸುಟ್ಟುಕೊಂಡಾಗಿದೆ. 20-20 ಸರ್ಕಾರದಲ್ಲಿ ಜೆಡಿಎಸ್ ವಿಶ್ವಾಸದ್ರೋಹ ಎಸಗಿದ ಸಂದರ್ಭದಲ್ಲಿ ಅನುಕಂಪ ಬಿಜೆಪಿ ಪರ ಇದ್ದುದರಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಜೆಡಿಎಸ್ ಜತೆ ಕೈಜೋಡಿಸಿದರೆ ಕೇವಲ ಅಧಿಕಾರಕ್ಕಾಗಿ ಬಿಜೆಪಿ ಈ ರೀತಿ ಮಾಡಿದೆ ಎಂದು ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಉಂಟುಮಾಡಬಹುದು. ಆದ್ದರಿಂದ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ. ಆಗಿದ್ದು ಆಗಲಿ ಎಂಬುದು ಇವರ ವಾದ.
ಅಧಿಕಾರದಲ್ಲಿ ಮುಂದುವರಿಯಬೇಕು: ಆದರೆ, ಹಲವರಿಗೆ ಸಾಧ್ಯವಾದಷ್ಟು ದಿನ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬ ಆಸೆ. ಇದಕ್ಕಾಗಿ ಜೆಡಿಎಸ್ ಬೆಂಬಲ ಪಡೆದುಕೊಳ್ಳಲೂ ಅವರು ಸಿದ್ಧರಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ ಸೇರಿದಂತೆ ಅಧಿಕಾರದಲ್ಲಿರುವ ಅನೇಕರ ಬೆಂಬಲವಿದೆ.
ಹೇಗೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಹೀಗಿರುವಾಗ ಇರುವ ಅಧಿಕಾರವನ್ನು ಕಳೆದುಕೊಳ್ಳುವ ಬದಲು ಕನಿಷ್ಠ ಮಾರ್ಚ್ ಅಂತ್ಯದವರೆಗಾದರೂ ಮುಂದುವರಿಯಬೇಕು. ಮೇಲಾಗಿ ಮಾರ್ಚ್ ಅಂತ್ಯಕ್ಕೆ ವಿವಿಧ ಇಲಾಖೆಗಳ ಬಿಲ್ ಪಾವತಿಯಾಗಲಿದ್ದು, ಈ ಸಂದರ್ಭದಲ್ಲಿ ಅಧಿಕಾರದಲ್ಲಿ ಇರಬೇಕು ಎಂಬುದು ಅವರ ಅಪೇಕ್ಷೆ. ಈ ಕಾರಣಕ್ಕಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದು ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಬಂದರೆ ಜೆಡಿಎಸ್ ಬೆಂಬಲ ಪಡೆಯುವುದರಲ್ಲಿ ತಪ್ಪಿಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ ಎನ್ನಲಾಗಿದೆ.
ಸಂಪುಟ ಸಭೆಯಲ್ಲಿ ಚರ್ಚೆ: ಈ ಎಲ್ಲಾ ಅಂಶಗಳ ಕುರಿತು ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲು ತೀರ್ಮಾನಿಸಲಾಗಿದೆ. ಸರ್ಕಾರದ ಭವಿಷ್ಯ ಏನೇ ಇರಲಿ, ಅಂದಿನಿಂದ ಎಲ್ಲಾ ಸಚಿವರು ತಮ್ಮ ಇಲಾಖೆಯ ಕಡತಗಳ ವಿಲೇವಾರಿ ಶುರುಹಚ್ಚಿಕೊಳ್ಳಲಿದ್ದಾರೆ. ಬಾಕಿ ಬಿಲ್ಗಳನ್ನು ಶೀಘ್ರ ಪಾವತಿಸಲು ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರ ಉರುಳುವುದರೊಳಗಾಗಿ ಕಡತಗಳನ್ನು ಸಂಪೂರ್ಣ ವಿಲೇ ಮಾಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.