ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಬಿಜೆಪಿ ಅಧಿಕಾರಕ್ಕೆ ಬರಲು ಪಟ್ಟ ಶ್ರಮದಿಂದ ಪಶ್ಚಾತ್ತಾಪ

Parashurama
Updated On : 25 Feb 2013, 1:06 am

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಅಂದು ನಾನು ಪಟ್ಟ ಪರಿಶ್ರಮ ನೆನಸಿಕೊಂಡರೆ ಇಂದು ಪಶ್ಚಾತ್ತಾಪ ಪಡುವಂತಾಗಿದೆ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕ ಜನತಾ ಪಕ್ಷ ಭಾನುವಾರ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ 'ಕಾರ್ಮಿಕ ಪ್ರತಿನಿಧಿಗಳ ಸಮಾವೇಶ' ಉದ್ಘಾಟಿಸಿ ಅವರು ಮಾತನಾಡಿದರು. 40 ವರ್ಷಗಳಿಂದ ರಾಜ್ಯದಲ್ಲಿ ಕಾರ್ಮಿಕರ, ರೈತರ ಪರವಾಗಿ ಹೋರಾಟ ನಡೆಸಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 110 ಸ್ಥಾನಗಳನ್ನು ಪಡೆದುಕೊಳ್ಳುವಂತೆ ಮಾಡಿದೆ. ಆದರೆ, ಅಂದು ಪಟ್ಟ ಶ್ರಮ ಇಂದು ನನಗೆ ಮುಳುವಾಗಿ ಪರಿಣಮಿಸಿದ ಕಾರಣ ಪಕ್ಷದಿಂದ ಹೊರಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಭಾವುಕರಾದರು. ಮುಖ್ಯಮಂತ್ರಿಯಾಗಿ ನಾನು ಪ್ರಾಮಾಣಿಕವಾಗಿ ಅಧಿಕಾರ ನಡೆಸುತ್ತಿದ್ದೆ. ಆದರೆ, ನನ್ನ ಬೆಳವಣಿಗೆ ಸಹಿಸದ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರನಾಯಕರು ಇಲ್ಲ- ಸಲ್ಲದ ಆರೋಪವನ್ನು ನನ್ನ ಮೇಲೆ ಹೊರಿಸಿ ಜೈಲಿಗೆ ಹೋಗುವಂತೆ ಮಾಡಿದರು ಎಂದು ಆರೋಪಿಸಿದರು. ರಾಷ್ಟ್ರೀಯ ಪಕ್ಷಗಳು ಕಾರ್ಮಿಕರು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸೋತಿವೆ. ಅಲ್ಲದೆ, ಕೇಂದ್ರ ಸರ್ಕಾರ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟವಾಗುವಂತೆ ಮಾಡಿದೆ ಎಂದರು.
ಕಾರ್ಮಿಕರ ಗೋಳು ಕೇಳುವರ್ಯಾರು: ಕಾರ್ಮಿಕರು ನಿತ್ಯ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಹಿಂದೆ ವಿಧಾನ ಮಂಡಲದ ಉಭಯ ಸದನದಲ್ಲಿ ಕಾರ್ಮಿಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು 3ರಿಂದ 5 ಕಾರ್ಮಿಕ ಮುಖಂಡರು ಶಾಸಕರಾಗಿ ಇರುತ್ತಿದ್ದರು. ಇಂದು ಯಾರೂ ಇಲ್ಲ. ಇದಕ್ಕಾಗಿ ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡೀಸ್ ಗೆಲ್ಲಿಸಿ ಕಾರ್ಮಿಕ ಸಚಿವರನ್ನಾಗಿ ಮಾಡಬೇಕು ಎಂದರು.
ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ:
ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಸುವರ್ಣ ಅವಕಾಶವಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ದೊಡ್ಡ ಶಕ್ತಿಯಾಗಿ ಹೊರ ಬರಲಿವೆ.
ಇದಕ್ಕಾಗಿ ಕೆಜೆಪಿ ಪಕ್ಷವು ಎಲ್ಲಾ ರೀತಿಯಲ್ಲೂ ಸಿದ್ಧತೆಗಳನ್ನು ಕೈಗೊಂಡಿದೆ ಎಂದರು. ಸಮಾರಂಭದಲ್ಲಿ ಮಾಜಿ ಸಚಿವೆ ಶೋಭ ಕಂರದ್ಲಾಜೆ, ಮಾಜಿ ಸಚಿವ ವಿಶ್ವನಾಥ್, ನಿವೃತ್ತ ಐಎಎಸ್ ಅಧಿಕಾರಿ ಗಂಗಾಧರ್, ಕಾಳಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement