ಬಿಜೆಪಿ ಬಿಡಲ್ಲ, ವದಂತಿಯಲ್ಲಿ ಹುರುಳಿಲ್ಲ: ಶಾಸಕ ಸತೀಶ್ ರೆಡ್ಡಿ
ಹೆಬ್ಬಗೋಡಿ: ಬೊಮ್ಮನಹಳ್ಳಿ ಕ್ಷೇತ್ರದಿಂದ ನಾನು ಆರಿಸಿಬಂದಾಗಿನಿಂದಲೂ ರಾಜಕೀಯ ಮಾಡುತ್ತ ಯಾರಲ್ಲೂ ಭೇದಭಾವ ಮೂಡಿಸಿಲ್ಲ. ನಾನು ಪಕ್ಷ ಬಿಡುವ ವಿಚಾರ ಗಾಳಿಸುದ್ದಿ ಎಂದು ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಪಕ್ಷ ತೊರೆಯುವ ಬಗೆಗಿನ ವದಂತಿಗಳಿಗೆ ತೆರೆ ಎಳೆದರು.
ಬೊಮ್ಮನಹಳ್ಳಿ ಕ್ಷೇತ್ರವ್ಯಾಪ್ತಿಯ ಗುಲ್ಬರ್ಗ ಕಾಲೋನಿ ಕೊಳಗೇರಿಯಲ್ಲಿ ಮನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿಪರ ಕಾರ್ಯಗಳಿಗೆ ಸದಾ ತೊಡಕಾಗಿ ಬರುವ ಕ್ಷೇತ್ರದ ರಾಜಕಾರಣಿಗಳು ಹಣದ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದರು. ಸಾಕಷ್ಟು ದಿನಗಳಿಂದ ಕ್ಷೇತ್ರದ ಶಾಸಕರ ಮೇಲೆ ಹರಿಹಾಯುವುದೇ ಕಾಂಗ್ರೆಸ್ ಕಾರ್ಯವಾದಂತಿದ್ದು, ಸದಾ ನಿದ್ದೆಯಲ್ಲಿರುವ ಕ್ಷೇತ್ರದ ಕಾಂಗ್ರೆಸ್ ನಾಯಕರು ಚುನಾವಣೆಯ ನಿಮಿತ್ತ ಎಚ್ಚರವಾಗಿರುವುದು ಹಾಸ್ಯಾಸ್ಪದ ಎಂದರು.
ಮತದಾರರು ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಪರ ಕಾರ್ಯಗಳನ್ನು ಗಮನಿಸುತ್ತಿದ್ದಾರೆ. ಈ ಎಲ್ಲಾ ವಿಚಾರಗಳಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದು ಖಚಿತ. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಜಯಗಳಿಸಬೇಕೆಂಬ ಉದ್ದೇಶದಿಂದ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿವೆ ಎಂದರು.
ಬಿಜೆಪಿ ಮುಖಂಡ ಸಚ್ಚಿದಾನಂದ ಮೂರ್ತಿ, ಸತೀಶ್ ರೆಡ್ಡಿ ಬಿಜೆಪಿ ತೊರೆಯುವ ಬಗೆಗೆ ಮೂಡಿದ್ದ ಗೊಂದಲಗಳಿಗೆ ತೆರೆಯೆಳೆದರು. ಮುಂದಿನ ಚುನಾವಣೆಯಲ್ಲಿ ಸತೀಶ್ ರೆಡ್ಡಿ ಬಿಜೆಪಿಯಿಂದಲೆ ಸ್ಪರ್ಧಿಸಲಿದ್ದು, ವಿರೋಧಿಗಳು ಈ ರೀತಿಯ ಗಾಳಿಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದರು.
ರಾಜ್ಯದ 224 ಕ್ಷೇತ್ರಗಳಲ್ಲಿ ಬೊಮ್ಮನಹಳ್ಳಿಯು ಗಮನಾರ್ಹ ಅಭಿವೃದ್ಧಿಯನ್ನು ಕಂಡಿದ್ದು ಅದನ್ನು ಮರೆಮಾಚುವಂತೆ ಮಾಡಲು ಹಲವಾರು ರಾಜಕೀಯ ಕೈವಾಡಗಳು ಒಂದಾಗಿ ನಿಂತಿವೆ. ಮತದಾರರು ಎಚ್ಚರವಾಗಿದ್ದು, ಮರೀಚಿಕೆಯಾಗಿದ್ದ ಕಾವೇರಿ ನೀರಿನ ಯೋಜನೆ ಸಕಾರಗೊಂಡಿದ್ದು ಕ್ಷೇತ್ರದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಆರಿಸಿ ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಬಿಎಂಪಿ ಸದಸ್ಯ ಮಂಜುನಾಥ ರೆಡ್ಡಿ, ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದ ಮತದಾರರಿಗೆ ಆಶ್ವಾಸನೆ ನೀಡಿದಂತೆ ಹಕ್ಕುಪತ್ರಗಳನ್ನು ವಿತರಿಸುವುದರೊಂದಿಗೆ ಕೊಟ್ಟ ಮಾತನ್ನು ಬಿಜೆಪಿ ಮತ್ತು ಶಾಸಕರು ಉಳಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಹಿಂದೆ ಎಷ್ಟೋ ಬಾರಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಗುಲ್ಬರ್ಗ ಕಾಲೋನಿಯ ಬಡಜನರಿಗೆ ವಸತಿ ಸೌಲಭ್ಯ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲೋನಿಯ ಜನರ ಬಹುದಿನದ ಕನಸು ನನಸಾಗಿದೆ ಎಂದರು.
ಈ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಕೂಡ ಕೆಲ ಶಕ್ತಿಗಳು ತೊಡಕಾಗಿ ನಿಂತಿದ್ದವು. ಅದನ್ನು ಲೆಕ್ಕಿಸದೆ ಉತ್ತಮ ರಸ್ತೆಗಳ ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ರೂಪಾ ರಮೇಶ್ ಹಾಗೂ ಇನ್ನಿತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.