ಆಶೀರ್ವಾದ ಮಾಡಿ, ಸಿಎಂ ಆಗ್ತೀನಿ ನೋಡಿ
ಬೆಂಗಳೂರು: ಜನ ಆಶೀರ್ವಾದ ಮಾಡಿದರೆ ಮುಂದಿನ ಹುಟ್ಟುಹಬ್ಬದ ವೇಳೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿರುತ್ತೇನೆ.
ಇದು ಬುಧವಾರ 71ನೇ ವಸಂತಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಜನ್ಮದಿನಾಚರಣೆ ಸಂದರ್ಭದಲ್ಲಿ ಮಾಡಿದ ಸಂಕಲ್ಪ.
ಕೆಜೆಪಿ ಕಚೇರಿಯಲ್ಲಿ ಬುಧವಾರ ಹಿತೈಷಿಗಳು, ಬೆಂಬಲಿಗರಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದು ಕರ್ನಾಟಕವನ್ನು ಕಲ್ಯಾಣ ರಾಜ್ಯವಾಗಿ ಮಾಡುವ ಸಂಕಲ್ಪ ನನ್ನದು ಎಂದರು.
ಜನತೆಯ ಆಶೀರ್ವಾದವಿದ್ದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಮುಂದಿನ ಚುನಾವಣೆಯಲ್ಲಿ ಜನ ನನ್ನನ್ನು ಬೆಂಬಲಿಸಲಿದ್ದಾರೆ. ಜನತೆಯ ಆಶೀರ್ವಾದದಿಂದ ಮುಂದಿನ ಹುಟ್ಟುಹಬ್ಬ ಸಂದರ್ಭದಲ್ಲಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಲ್ಲಿ ಮಹತ್ತರ ಪಾತ್ರ: ಪ್ರಾದೇಶಿಕ ಪಕ್ಷವನ್ನು ಬಲಗೊಳಿಸಿ ಅಧಿಕಾರಕ್ಕೆ ತರುವ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ರೂಪಿಸುವುದು ನನ್ನ ಗುರಿ. ಹೀಗಾಗಿ ಕೆಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ರಾಜ್ಯದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ರಾಜ್ಯದಲ್ಲಿ ಕೆಜೆಪಿಯನ್ನು ಅಧಿಕಾರಕ್ಕೆ ತರುವುದರ ಜತೆಗೆ, ಮುಂದಿನ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ರಚನೆಯಾಗಲಿರುವ ಸರ್ಕಾರದಲ್ಲಿ ಮಹತ್ತರ ಪಾತ್ರ ವಹಿಸುವ ಆಶಯ ನನ್ನದು ಎಂದು ತಿಳಿಸಿದರು.
ಯಾರೇ ಆಗಲಿ, ಒಬ್ಬ ವ್ಯಕ್ತಿ ಅಧಿಕಾರ ಕಳೆದುಕೊಂಡ ಬಳಿಕ ಬೆಂಬಲಿಗರೆನಿಸಿಕೊಂಡವರು ಆತನ ಜತೆಗಿರುವುದಿಲ್ಲ. ಆದರೆ, ಈಗಲೂ ನಮಗೆ ಲಕ್ಷಾಂತರ ಬೆಂಬಲಿಗರಿದ್ದಾರೆ. ಇದಕ್ಕೆಲ್ಲಾ ನಾನು ಮಾಡಿದ ಒಳ್ಳೆಯ ಕೆಲಸ ಕಾರಣ. ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಸಾಧನೆಗಳನ್ನು ಜನ ಮರೆತಿಲ್ಲ ಎಂದು ಹೇಳಿದರು.
ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಿದಾಗ ನನ್ನ ಮುಂದೆ ಯಾವುದೇ ಸ್ಪಷ್ಟ ಗುರಿ ಇರಲಿಲ್ಲ. ಇದೀಗ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡುವ ಸ್ಪಷ್ಟ ಗುರಿ ಇದೆ. ಜನರ ಬೆಂಬಲವೂ ಇದೆ. ಹೀಗಾಗಿ ಗುರಿ ಸಾಧನೆಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೇದಿಕೆಯಾಗಲಿದೆ ಎಂದರು.
ದೇವಸ್ಥಾನದಲ್ಲಿ ಪೂಜೆ: ಜನ್ಮದಿನದ ಸಲುವಾಗಿ ಯಡಿಯೂರಪ್ಪ ಅವರು ಸಂಜಯನಗರದ ರಾಧಾಕೃಷ್ಣ ಮಂದಿರಕ್ಕೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಜೆಪಿಯ ಕೆಲವು ಮುಖಂಡರೂ ಹಾಜರಿದ್ದರು. ಬಳಿಕ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿ ತಿನ್ನಿಸಿದರು.
ಕೆಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.