ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

'ಪೂಜಾ' ಬಲಕ್ಕೆ ಇನ್ನೊಬ್ಬ ನಟಿ ಅಸು'ರಕ್ಷಿತ'!

Parashurama
Updated On : 27 Feb 2013, 9:22 am

ಬೆಂಗಳೂರು: ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಾಲಿಗೆ ಹೀರೋಯಿನ್‌ಗಳೇ 'ವಿಲನ್‌'ಗಳಾಗುವ ಪರಿಸ್ಥಿತಿ ಕಾಣಿಸಿಕೊಂಡಿದೆ. ಅವರು ಸ್ಟಾರ್ ವ್ಯಾಲ್ಯೂ ತಂದುಕೊಡುವ ಬದಲು ನ್ಯುಸೆನ್ಸ್ ವ್ಯಾಲ್ಯೂ ಸೃಷ್ಟಿಸುತ್ತಿದೆ.
ನಟಿಯರಾದ ರಕ್ಷಿತಾ ಮತ್ತು ಪೂಜಾಗಾಂಧಿ ಅವರ ವಿಚಾರ ಬಿಎಸ್‌ಆರ್ ಕಾಂಗ್ರೆಸ್ ನಾಯಕರನ್ನು ಪೀಕಲಾಟಕ್ಕೆ ಸಿಲುಕಿಸಿದೆ. ಎರಡು ಜಡೆಗಳು ಒಟ್ಟಿಗಿರುವುದಿಲ್ಲ ಎಂಬ ಮಾತು ಹಳೆಯದು. ಜಡೆ ಇಲ್ಲದಿದ್ದರೂ ಇವರು ಒಟ್ಟಿಗಿರಲು ಸಿದ್ಧರಿಲ್ಲ ಎಂಬುದು ಹೊಸ ಸುದ್ದಿ.
ನಟಿ ಪೂಜಾಗಾಂಧಿ ಬಿಎಸ್‌ಆರ್ ಕಾಂಗ್ರೆಸ್ ಸೇರಿಕೊಂಡಿರುವುದು ಆ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ನಟಿ ರಕ್ಷಿತಾಗೆ ಒಂದು ಚೂರೂ ಇಷ್ಟವಿಲ್ಲ. ಈಗಾಗಲೇ ತಮ್ಮ ಆಪ್ತ ವಲಯಲ್ಲಿ ಆಕೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಪೂಜಾಗಾಂಧಿಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಿದರೆ ತಾನು ಪಕ್ಷ ತೊರೆಯಬೇಕಾಗುತ್ತದೆ ಎಂಬರ್ಥದಲ್ಲಿ ನಟಿ ರಕ್ಷಿತಾ ಮಾತನಾಡಿದ್ದಾರೆ. ಅದಕ್ಕಾಗಿ ಪೂಜಾಗಾಂಧಿಗೆ ಒಳ್ಳೆಯ ಸ್ಥಾನಮಾನ ನೀಡುತ್ತಾರೆಯೇ ಎಂಬುದನ್ನು ತಮ್ಮ ಆಪ್ತರ ಮೂಲಕ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಹಾರುವ ಹಕ್ಕಿ: ರಾಜಕೀಯದ ಪಾಲಿಗೆ ಪೂಜಾ ಗಾಂಧಿ ಹಾರುವ ಹಕ್ಕಿಯಾಗಿದ್ದಾರೆ. ರಾಜಕೀಯ ಸೇರಿದ ಕೆಲವೇ ತಿಂಗಳುಗಳಲ್ಲಿ ಮೂರು ಪಕ್ಷಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಜೆಡಿಎಸ್ ಸೇರಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿದರು.
ಇದಾದ ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ಅವರು ಹಾವೇರಿ ಸಮಾವೇಶದಲ್ಲಿ ಕೆಜೆಪಿ ಸಂಘಟನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ವೇದಿಕೆ ಏರಿ ಕುಳಿತರು. ಯಡಿಯೂರಪ್ಪ ಅವರಿಗೆ ಜನರ ಬಗ್ಗೆ ಕಾಳಜಿ, ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಭವಿಷ್ಯದಲ್ಲಿ ಅವರಿಗಿರುವ ಕನಸುಗಳನ್ನು ಮೆಚ್ಚಿ ಕೆಜೆಪಿ ಸೇರುತ್ತಿದ್ದೇನೆ. ಯಡಿಯೂರಪ್ಪ ನನ್ನ ತಂದೆಗೆ ಸಮಾನ ಎಂದು ಹೇಳಿದ್ದರು. ಇದೀಗ ಈ ತಂದೆಯ ಸಹವಾಸವೇ ಬೇಡ ಎಂದು ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಸೇರುವ ಹವಣಿಕೆಯಲ್ಲಿದ್ದಾರೆ.
ಇಂಥವರಿಗೆಲ್ಲಾ ಅಧಿಕಾರ ನೀಡಿದರೆ ಬಿಎಸ್‌ಆರ್ ಪಕ್ಷ ಸ್ಥಾಪನೆಯಾದಾಗಿನಿಂದಲೂ ಆ ಪಕ್ಷದಲ್ಲಿದ್ದುಕೊಂಡು ಸಂಘಟನೆ ಕಾರ್ಯದಲ್ಲಿ ನಿರತವಾಗಿರುವ ತಮ್ಮನ್ನು ಕಡೆಗಣಿಸಿದಂತಾಗುತ್ತದೆ ಎಂಬುದು ರಕ್ಷಿತಾ ಅವರ ನೋವು.
ಸ್ಟಾರ್ ವ್ಯಾಲ್ಯೂ ಕುಸಿಯುವ ಆತಂಕ: ಇದಕ್ಕಿಂತ ಮುಖ್ಯವಾಗಿ ಬಿಎಸ್‌ಆರ್ ಕಾಂಗ್ರೆಸ್‌ನಲ್ಲಿ ತಮಗಿರುವ 'ಸ್ಟಾರ್ ವ್ಯಾಲ್ಯೂ' ಕಡಿಮೆಯಾಗುತ್ತದೆ ಎಂಬ ಆತಂಕ ರಕ್ಷಿತಾ ಅವರಿಗಿದೆ. ಏಕೆಂದರೆ, ಕೆಲ ವರ್ಷಗಳ ಹಿಂದೆ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದ ರಕ್ಷಿತಾ ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೂ ಹೀರೋಯಿನ್ ಆಕರ್ಷಣೆಯನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡಿದ್ದಾರೆ.
ಆದರೆ, ಪೂಜಾಗಾಂಧಿ ಈಗಲೂ ಹೀರೋಯಿನ್ ಆಗಿ ಚಿತ್ರರಂಗದಲ್ಲಿದ್ದಾರೆ. ಬಹುಬೇಡಿಕೆಯ ನಟಿ ಅಲ್ಲವಾದರೂ, ಸ್ಟಾರ್‌ವ್ಯಾಲ್ಯೂ ಕಡಿಮೆಯಾಗಿಲ್ಲ. ಹೀಗಾಗಿ ಪೂಜಾಗಾಂಧಿಗೆ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಿದರೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಸಹಜವಾಗಿಯೇ ತಾವು ತೆರೆಮರೆಗೆ ಸರಿಯಬೇಕಾಗುತ್ತದೆ ಎಂಬ ಆತಂಕ ರಕ್ಷಿತಾ ಅವರದ್ದು.
ಹೀಗಾಗಿ ಪೂಜಾಗಾಂಧಿಗೆ ಅಧಿಕಾರ ಸಿಕ್ಕಿದರೆ ಆಕೆಯಿಂದಾಗಿ ಪಕ್ಷದಲ್ಲಿ ಮೂಲೆಗುಂಪಾಗುವ ಬದಲು ಅದಕ್ಕೆ ಮುನ್ನವೇ ಹೊರಬರಬೇಕು ಎಂಬ ಅಭಿಪ್ರಾಯಕ್ಕೆ ಬಂದಿರುವ ರಕ್ಷಿತಾ, ತನ್ನೊಂದಿಗೆ ಇನ್ನೂ ಕೆಲವರನ್ನು ಕರೆದೊಯ್ಯುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತ ಪೂಜಾಗಾಂಧಿ ತನ್ನೊಂದಿಗೆ ಇನ್ನೊಬ್ಬಳು ನಟಿಯನ್ನು ಕರೆತರಲೂ ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿಯೂ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement