ಬಡವರ ಕಾಳಜಿ ಇಲ್ಲದ ಕೃಷ್ಣ ಭೈರೇಗೌಡ: ಎ.ರವಿ
ಯಲಹಂಕ: ಶಾಸಕ ಕೃಷ್ಣ ಭೈರೇಗೌಡ ಒಬ್ಬ ಬಡವನಿಗೆ ನಿವೇಶನ ಹಕ್ಕು ಪತ್ರ ನೀಡಿರುವ ದಾಖಲೆ ತೋರಿಸಿದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ರವಿ ವೀಳ್ಯ ನೀಡಿದ್ದಾರೆ.
ಜಾಲ ಹೋಬಳಿ ಬಾಗಲೂರು ಗ್ರಾಮದಲ್ಲಿ ಬಿಜೆಪಿಗೆ ಸೇರ್ಪಡೆ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬರಮಾಡಿಕೊಂಡು ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷದಿಂದ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರು ಒಂದು ಸಭೆ ಮಾಡಿಲ್ಲ. ಒಬ್ಬ ಬಡವನಿಗೂ ನಿವೇಶನ ಹಕ್ಕು ಪತ್ರ ಕೊಡಿಸಿಲ್ಲ. ನೂರಾರು ಎಕರೆ ಸರ್ಕಾರಿ ಭೂಮಿ ಇದ್ದರೂ ನಿವೇಶನ ಹಂಚದ ಬಡವರ ಬಗ್ಗೆ ಕಾಳಜಿ ಇಲ್ಲದ ಜನಪ್ರತಿನಿಧಿ ಎಂದು ದೂರಿದರು.
ಬಿಜೆಪಿಯವರು ಕಳೆದ ಒಂದೂವರೆ ವರ್ಷದಿಂದ ಗೃಹ ಮಂತ್ರಿ ಆರ್. ಅಶೋಕ್, ಸಂಸದರಾದ ಡಿ.ಬಿ. ಚಂದ್ರೇಗೌಡ, ರಾಜ್ಯ ಸರ್ಕಾರದ ಅಧಿಕಾರಿಗಳ ಹತ್ತಿರ ತಿರುಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಣವನ್ನು ತಂದಿದ್ದಾರೆ. ಆದರೆ, ಇವರು ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಲಿ ಅಥವಾ ಚಂದ್ರೇಗೌಡರನ್ನು ಗೌರವಕ್ಕೂ ಕರೆಯದೆ ತಾವೊಬ್ಬರೇ ಕಾಮಗಾರಿ ಪೂಜೆ ಮಾಡಿ ಇವರ ಹೆಸರನ್ನು ಹಾಕಿಸಿಕೊಂಡು ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ಇದು ಸಣ್ಣತನದ ಪರಮಾವಧಿ ಎಂದು ವ್ಯಂಗ್ಯವಾಡಿದರು.
ಕೃಷ್ಣ ಭೈರೇಗೌಡರಿಗೆ ಸ್ಥಳೀಯ ಕ್ಷೇತ್ರದ ಬಗ್ಗೆ ಆಸಕ್ತಿ ಇಲ್ಲ. ಹದಿನೈದು ದಿವಸ ದೆಹಲಿಯಲ್ಲಿ, 15 ದಿವಸ ರಾಜ್ಯದಲ್ಲಿ ಸುತ್ತುತ್ತಿದ್ದರೆ, ಕ್ಷೇತ್ರದ ಗತಿ ಏನು? ಕ್ಷೇತ್ರದಲ್ಲಿ ಕುಡಿಯಲು ನೀರಿಲ್ಲ, ರಸ್ತೆಗಳು ಚೆನ್ನಾಗಿಲ್ಲ, ಜನರ ಕೈಗೆ ಕೃಷ್ಣ ಸಿಗುತ್ತಿಲ್ಲ ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ರಾಮಚಂದ್ರೇಗೌಡ ಮಾತನಾಡಿ ಬಿಜೆಪಿ ಒಬ್ಬಿಬ್ಬರ ಪಕ್ಷ ಅಲ್ಲ. ಇದು ಕಾರ್ಯಕರ್ತರ ಪಕ್ಷ. ಬರುವವರು ಬರುತ್ತಿರುತ್ತಾರೆ, ನಾವು ವಾಜೆಪೇಯಿ ಹಾಕಿದ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷ ಸುಬ್ಬಣ್ಣ, ಜೆಡಿಎಸ್ ಯುವ ಜನತಾದಳದ ಜಿಲ್ಲಾ ಅಧ್ಯಕ್ಷ ಸಂತೋಶ್ ಬೆಟ್ಟಹಲಸೂರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸಪ್ಪ ಗರಡಿ, ಗ್ರಾಮ ಪಂಚಾಯಿತಿ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.