ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಬಿಎಸ್‌ವೈಗೆ ಮತ್ತೊಂದು ಕಂಟಕ, ಕೋರ್ಟ್‌ನಲ್ಲಿ ಕೆಜೆಪಿ

Parashurama
Updated On : 27 Feb 2013, 10:48 am

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ತನ್ನ ಮೊಟ್ಟ ಮೊದಲ ಚುನಾವಣೆಗೆ ಸಜ್ಜಾಗುತ್ತಿದ್ದಂತೆ ಇತ್ತ ಪಕ್ಷ ಉಳಿಸಿಕೊಳ್ಳಲು ನ್ಯಾಯಾಲಯದಲ್ಲೂ ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಎಂದು ಘೋಷಿಸಿರುವ ರಾಜ್ಯ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ಕೆಜೆಪಿ ಅಧ್ಯಕ್ಷರಾಗಲು ಯಡಿಯೂರಪ್ಪ ಅವರು ತಮ್ಮ ನಕಲಿ ಸಹಿ ಮಾಡಿದ್ದಾರೆ ಎಂದು ಆರೋಪಿಸಿ ಎಸಿಎಂಎಂ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಇದರಿಂದಾಗಿ ಚುನಾವಣೆ ಜತೆ ಜತೆಗೆ ಕಾನೂನು ಹೋರಾಟಕ್ಕೂ ಯಡಿಯೂರಪ್ಪ ಅವರು ಸಿದ್ಧರಾಗಬೇಕಾಗಿದೆ. ಅದರಲ್ಲೂ ನಕಲಿ ಸಹಿ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ 420, 421 ಮತ್ತು 210 ಅಡಿಯಲ್ಲಿ ತನಿಖೆಗೆ ನ್ಯಾಯಾಲಯ ಆದೇಶಿಸಿರುವುದು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಆಯೋಗದ ವಿರುದ್ಧ ಅರ್ಜಿ: ತಾವು ಪಕ್ಷಕ್ಕೆ ರಾಜಿನಾಮೆ ನೀಡಿರುವುದಾಗಿ ನಕಲಿ ಪ್ರಮಾಣಪತ್ರ ಸಲ್ಲಿಸಿ ಯಡಿಯೂರಪ್ಪ ಅವರು ಚುನಾವಣಾ ಆಯೋಗದಿಂದ ತಮ್ಮ ಪರವಾದ ತೀರ್ಪು ಪಡೆದಿದ್ದಾರೆ. ತಮ್ಮ ಹೆಸರಿನ ನಕಲಿ ಪ್ರಮಾಣಪತ್ರ ಆಧರಿಸಿ ಆಯೋಗವು ಪಕ್ಷವನ್ನು ಯಡಿಯೂರಪ್ಪ ಅವರ ಸುಪರ್ದಿಗೆ ನೀಡಿದೆ ಎಂದು ಆರೋಪಿಸಿ ಪದ್ಮನಾಭ ಪ್ರಸನ್ನಕುಮಾರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾ. ಮೋಹನ ಶಾಂತನಗೌಡರ್ ಅವರಿದ್ದ ಪೀಠ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಎಂದು ಘೋಷಿಸಿರುವ ಆಯೋಗದ ತೀರ್ಪು ರದ್ದುಗೊಳಿಸಿ ಹಾಗೂ ತಮ್ಮನ್ನು ಅಧ್ಯಕ್ಷ ಎಂದು ಘೋಷಿಸಬೇಕು ಎಂದು ಪ್ರಸನ್ನಕುಮಾರ್ ಕೋರಿದ್ದಾರೆ.
ವಿವಾದವೇನು?: ಕೆಜೆಪಿ ಪಕ್ಷಕ್ಕೆ ಅಧ್ಯಕ್ಷರಾರು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಪ್ರಸನ್ನಕುಮಾರ್, ಯಡಿಯೂರಪ್ಪ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್‌ಕುಮಾರ್ ಅವರಿಂದ ಚುನಾವಣಾ ಆಯೋಗ ಪ್ರಮಾಣಪತ್ರ ಕೋರಿತ್ತು. ಅದರಂತೆ, ಪ್ರಮಾಣಪತ್ರ ಸಲ್ಲಿಸಿದ್ದ ಯಡಿಯೂರಪ್ಪ ಹಾಗೂ ಧನಂಜಯಕುಮಾರ್ ಅವರು, ಪ್ರಸನ್ನಕುಮಾರ್ ಪಕ್ಷಕ್ಕೆ ಈಗಾಗಲೇ ರಾಜಿನಾಮೆ ನೀಡಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಪರಿಗಣಿಸಿದ ಆಯೋಗ, ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷರು ಎಂದು ಘೋಷಿಸಿತ್ತು.
ಆದರೆ, ತಾವು ಪಕ್ಷಕ್ಕೆ ರಾಜಿನಾಮೆ ನೀಡಿಲ್ಲ. ತಮ್ಮ ಸಹಿಯನ್ನು ನಕಲು ಮಾಡಿ ಪ್ರಮಾಣಪತ್ರ ಸಲ್ಲಿಸಲಾಗಿದೆ. ಇಲ್ಲಿಯವರೆಗೆ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಎಂದು ಪಕ್ಷದ ಕಾರ್ಯಕಾರಿ ಸಮಿತಿ ಅಧಿಕೃತವಾಗಿ ಘೋಷಿಸಿಲ್ಲ ಎಂದು ಪ್ರಸನ್ನಕುಮಾರ್ ಆಕ್ಷೇಪಿಸಿದ್ದಾರೆ.
ವಂಚನೆ ದೂರು: ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ನಕಲಿ ಸಹಿ ಮಾಡಿ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಕೋರಿ ಪದ್ಮನಾಭ ಪ್ರಸನ್ನ ಕುಮಾರ್ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಧೀಶರು, ಈ ಕುರಿತು ತನಿಖೆ ನಡೆಸುವಂತೆ ಸಂಜಯನಗರ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಮಾನನಷ್ಟ ಮೊಕದ್ದಮೆ
ಈ ಮಧ್ಯೆ ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವ ಪದ್ಮನಾಭಪ್ರಸನ್ನ ಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. 25 ಕೋಟಿ ನೀಡಿ ಚುನಾವಣಾ ಆಯೋಗವನ್ನೇ ತಮ್ಮ ಪರ ಒಲಿಸಿಕೊಂಡು ಯಡಿಯೂರಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾನೇ ಕೆಜೆಪಿ ಅಧ್ಯಕ್ಷ ಎಂದು ಪದೇ ಪದೇ ಹೇಳಿಕೊಂಡು ಪ್ರಸನ್ನಕುಮಾರ್ ಅವಮಾನ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು. ಪ್ರಸನ್ನಕುಮಾರ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಹಿಡಿದು ತಾವು ಅಧ್ಯಕ್ಷರಾಗಿ ಆಯ್ಕೆಯಾಗಿ ಪಕ್ಷವನ್ನು ಮುನ್ನಡೆಸುತ್ತಿರುವವರೆಗಿನ ಎಲ್ಲಾ ದಾಖಲೆಗಳನ್ನು ನೀಡಿದ ಬಳಿಕವೇ ಆಯೋಗ ತಮ್ಮ ಪರವಾಗಿ ಆದೇಶ ನೀಡಿದೆ. ಹೀಗಿದ್ದರೂ ನನ್ನ, ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಪ್ರಸನ್ನಕುಮಾರ್ ಅದನ್ನು ಸಾಬೀತುಪಡಿಸಲಿ  ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement