'ರಾಮ'ನಾರು ನಗರಕ್ಕೆ?
ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ 2ರಲ್ಲಿ ಜೆಡಿಎಸ್, ತಲಾ ಒಂದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರಿದ್ದಾರೆ. ಈ ಬಾರಿಯ ಕಣದ ಸಿದ್ಥತೆ ಹೇಗಿದೆ ಎಂದು ಅರಿಯಲು ಇದನ್ನು ಓದಿ..
ಚನ್ನಪಟ್ಟಣ: ನಡೆಯದು 'ಸೈನಿಕ'ನ ಕದನ
ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸಿ.ಪಿ. ಯೋಗೇಶ್ವರ್. ಈ ಬಾರಿ ಕಣದಿಂದ ಹಿಂದೆ ಸರಿದಿದ್ದು ಬಿಜೆಪಿ ಅಭ್ಯರ್ಥಿ ಹುಡುಕಾಟದಲ್ಲಿದೆ. ಅನಿತಾ ಕುಮಾರಸ್ವಾಮಿ ಮಧುಗಿರಿ ಬಿಟ್ಟು ಈ ಕ್ಷೇತ್ರದಲ್ಲಿ ಸ್ಪರ್ಧಿಸುವ ತಯಾರಿ ನಡೆಸಿದ್ದಾರೆ. ಯೋಗೇಶ್ವರ್ ಪಕ್ಷಾಂತರದ ನಂತರ ಕಾಂಗ್ರೆಸ್ ಮೂರಾಬಟ್ಟೆಯಾಗಿದೆ. ಮಾಜಿ ಸಚಿವ ವೆಂಕಟಪ್ಪ ಅವರ ಇಬ್ಬರು ಮೊಮ್ಮಕ್ಕಳಾದ ಟಿ.ಕೆ.ಯೋಗೇಶ್, ರಘುನಂದನ್ ರಾಮಣ್ಣ ಒಬ್ಬರಾದ ನಂತರ ಇನ್ನೊಬ್ಬರಂತೆ ಮರು ಚುನಾವಣೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಈ ಬಾರಿಯೂ ಅವರ ಹೆಸರುಗಳು ಟಿಕೆಟ್ಗೆ ಶಿಫಾರಸಾಗಿವೆ. ಬಿಎಸ್ಆರ್ ಕಾಂಗ್ರೆಸ್ನಿಂದ ಪಾರ್ಥಸಾರಥಿ ಹೆಸರು ಘೋಷಣೆಯಾಗಿದೆ. ಕೆಜೆಪಿ, ಬಿಜೆಪಿ ಅಭ್ಯರ್ಥಿಗಳಿನ್ನೂ ಅಖೈರಾಗಿಲ್ಲ.
ಕನಕ'ಪುರ' ಪ್ರವೇಶಕ್ಕೆ ಸಿಂಧ್ಯಾ, ಡಿಕೆಶಿ ಕಾದಾಟ
ಕನಕಪುರ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್ನ ಡಿ.ಕೆ. ಶಿವಕುಮಾರ್. ಈ ಬಾರಿಯೂ ಅವರೇ ಕಾಂಗ್ರೆಸ್ ಹುರಿಯಾಳು. ಜೆಡಿಎಸ್ನಿಂದ ಪಿ.ಜಿ.ಆರ್.ಸಿಂಧ್ಯಾ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ನಾರಾಯಣಗೌಡ ಜೆಡಿಎಸ್ ಸೇರಿದ್ದಾರೆ. ಬಿಜೆಪಿ, ಕೆಜೆಪಿಗೆ ಅಭ್ಯರ್ಥಿ ಹುಡುಕಾಡುವ ಸ್ಥಿತಿ. ಬಿಎಸ್ಆರ್ ಕಾಂಗ್ರೆಸ್ನಿಂದ ಜಯ ಕರ್ನಾಟಕ ಸಂಘಟನೆಯ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಸ್ಪರ್ಧಾಕಾಂಕ್ಷಿ. ವಿಧಾನಸಭೆ ಚುನಾವಣೆಗಳ ಮಟ್ಟಿಗೆ ಸೋಲಿಲ್ಲದ ಸರದಾರರ ಎನಿಸಿರುವ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮತ್ತು ಸತತ 5 ಬಾರಿ ಶಾಸಕರಾದ ಡಿ.ಕೆ.ಶಿವಕುಮಾರ್ ನಡುವೆ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಹೀಗಾಗಿ ಮದಗಜಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ.
ಸ್ವಲ್ಪ ತಡಿ... ಇದು ಮಾಗಡಿ...
ಮಾಗಡಿ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್ನ ಎಚ್.ಸಿ. ಬಾಲಕೃಷ್ಣ. ಈ ಬಾರಿಯೂ ಅವರೇ ಅಭ್ಯರ್ಥಿ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಸೋಲಿನ ಬಳಿಕ ಇತ್ತ ತಲೆ ಹಾಕಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆಪಿಸಿಸಿ ಸದಸ್ಯ ಎ.ಮಂಜುನಾಥ್, ಜೇಡ್ರಳ್ಳಿ ಕೃಷ್ಣಪ್ಪ ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ ನಡೆಸುತ್ತಿದ್ದಾರೆ. ಮಂಜುನಾಥ್ ಬೆನ್ನಿಗೆ ಡಿಕೆಶಿ ಇದ್ದರೆ, ಜೇಡ್ರಳ್ಳಿಗೆ ಮಾಜಿ ತೇಜಸ್ವಿನಿಗೌಡ ಟಿಕೆಟ್ ಅಭಯ ನೀಡಿದ್ದಾರೆ. ಜೇಡ್ರಳ್ಳಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಕೆಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಕಳೆದ ಬಾರಿ ಕಾಂಗ್ರೆಸ್ ಬಿ ಫಾರಂ ಪಡೆದು ಠೇವಣಿ ಕಳೆದುಕೊಂಡಿದ್ದ ಕಲ್ಪನಾ ಶಿವಣ್ಣ ಅವರು ನಿರಸ್ತ್ರರಾಗಿದ್ದಾರೆ. ಬಿಜೆಪಿ, ಕೆಜೆಪಿ, ಬಿಎಸ್ಆರ್ ಪಕ್ಷಗಳ ಟಿಕೆಟ್ಗೆ ಪೈಪೋಟಿ ಇಲ್ಲ.
ರಾಮನಗರ: ಕುಮಾರ ಸಂಭವ
ರಾಮನಗರ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್ನ ಕೆ.ರಾಜು. ಈ ಬಾರಿ ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಹೀಗಾಗಿ ಜೆಡಿಎಸ್ನಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ. ಈಗಾಗಲೇ ಘೋಷಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ ಪ್ರತಿ ಚುನಾವಣೆಯಲ್ಲೂ ಇಲ್ಲಿ ಎದುರಾಳಿ ಬದಲಾಗುತ್ತಿದ್ದಾರೆ. 2004ರಲ್ಲಿ ಸಿ.ಎಂ. ಲಿಂಗಪ್ಪ ಸೆಣಸಿದ್ದರೆ, 2008ರಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ನಿಚ್ಚಾನಿ ಪ್ರತಿಸ್ಪರ್ಧಿ. ಈ ಬಾರಿ ಕಂದಾಯ ಇಲಾಖೆಯ ಸ್ವಯಂ ನೃವೃತ್ತಿ ಪಡೆದ ನೌಕರ ಮರಿದೇವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ನಗರಸಭೆ ಮಾಜಿ ಅಧ್ಯಕ್ಷ ಕಿಜರ್ ಪಾಷ ಕೆಜೆಪಿ ಅಭ್ಯರ್ಥಿ. ಬಿಜೆಪಿ ಮತ್ತು ಬಿಎಸ್ಆರ್ ಟಿಕೆಟ್ ಕೇಳುವವರಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.