ಬೆಂಗಳೂರು: ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಬಿಜೆಪಿ ಕೋರ್ ಕಮಿಟಿ ಸಭೆ ಸೋಮವಾರ ನಡೆಯಲಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉದ್ಯಮಿ ತುಳಸಿ ಮುನಿರಾಜು ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದ್ದು, ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳು ಸಿಗದೆ ಪರದಾಡುವಂತಾಗಿದೆ. ಹೀಗಾಗಿ ಕೋರ್ ಕಮಿಟಿ ಸಭೆಯ ಬಳಿಕವೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಶಾಸಕ ಆರ್. ಅಶೋಕ ಅವರು ಕಣಕ್ಕಿಳಿಯಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ಬೇರೆ ಅಭ್ಯರ್ಥಿ ಬಗ್ಗೆ ಯೋಚಿಸಬೇಕಾಯಿತು. ಈ ಸಂದರ್ಭದಲ್ಲಿ ತುಳಸಿ ಮುನಿರಾಜು ಅವರ ಹೆಸರನ್ನು ದೆಹಲಿ ನಾಯಕರೇ ಪ್ರಸ್ತಾಪಿಸಿ ಈ ಬಗ್ಗೆ ರಾಜ್ಯದ ಮುಖಂಡರಿಗೆ ಮಾಹಿತಿ ಕಳುಹಿಸಿದರು. ಅದರಂತೆ ಮುನಿರಾಜು ಅವರ ಹೆಸರನ್ನೇ ಅಂತಿಮಗೊಳಿಸಲು ರಾಜ್ಯ ಮುಖಂಡರು ತೀರ್ಮಾನಿಸಿದ್ದಾರೆ.
ಏಕೆಂದರೆ, ಮುನಿರಾಜು ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಈ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಮುನಿರಾಜು ಅವರ ಹೆಸರಿಗೆ ಬಹುತೇಕ ನಾಯಕರು ಒಪ್ಪಿದ್ದಾರೆ. ಈ ಮಧ್ಯೆ ಒಂದಿಬ್ಬರು ಅಡ್ಡಗಾಲು ಹಾಕಲು ಯತ್ನಿಸಿದರಾದರೂ ಪಕ್ಷದ ರಾಷ್ಟ್ರೀಯ ನಾಯಕರು ಮುನಿರಾಜು ಹೆಸರು ಪ್ರಸ್ತಾಪಿಸಿದ್ದರಿಂದ ಅವರು ಸುಮ್ಮನಾದರು ಎಂದು ಮೂಲಗಳು ತಿಳಿಸಿವೆ.
ಮಂಡ್ಯದಲ್ಲಿ ಅಭ್ಯರ್ಥಿಯೇ ಸಿಗುತ್ತಿಲ್ಲ: ಇನ್ನು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹುಡುಕುವುದೇ ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಎಲ್.ಆರ್. ಶಿವರಾಮೇಗೌಡ ಅವರು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಅಲ್ಲಿ ಹೊಸ ಅಭ್ಯರ್ಥಿಗಳನ್ನು ಹುಡುಕಬೇಕಾಗಿದೆ. ಆದರೆ, ಈ ಚುನಾವಣೆ ಕೆಲವೇ ತಿಂಗಳ ಅವಧಿಗೆ ನಡೆಯುತ್ತಿರುವುದರಿಂದ ಕಣಕ್ಕಿಳಿಯಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಅವರನ್ನು ಪಕ್ಷಕ್ಕೆ ಕರೆತಂದು ಅವರನ್ನು ಕಣಕ್ಕಿಳಿಯುವ ಬಗ್ಗೆ ಪಕ್ಷ ಚಿಂತನೆ ನಡೆಸುತ್ತಿದೆ. ಕೃಷ್ಣ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಹೀಗಾಗಿ ಅವರೀಗ ಯಾವುದೇ ಪಕ್ಷದಲ್ಲಿ ಇಲ್ಲ. ಅದ್ದರಿಂದ ಅವರನ್ನು ಕರೆತರುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದ್ದು, ಕೃಷ್ಣ ಅವರು ಇದಕ್ಕೆ ಒಪ್ಪಿದರೆ ಅವರೇ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಮೂಲಗಳು ಹೇಳಿವೆ.