ಬೆಂಗಳೂರು: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಉಪ ಚುನಾವಣೆಗೆ ಅಬ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ತಿಣುಕಾಡುತ್ತಿದೆ. ಸೋಮವಾರ ತಡರಾತ್ರಿವರಿಗೆ ಕೋರ್ ಕಮಿಟಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತಾದರೂ ಅಂತಿಮ ನಿರ್ಧಾರ ಸಾಧ್ಯವಾಗಲಿಲ್ಲ.
ಗ್ರಾಮಾಂತರ ಕ್ಷೇತ್ರಕ್ಕೆ ಶಾಸಕ ಆರ್. ಅಶೋಕ, ಉದ್ಯಮಿ ತುಳುಸಿ ಮುನಿರಾಜು, ಶಂಕರೇಗೌಡ ಅವರ ಹೆಸರು ಪ್ರಸ್ತಾಪವಾಗಿದ್ದು, ಸದ್ಯಕ್ಕೆ ತುಳುಸಿ ಮುನಿರಾಜು, ಶಂಕರೇಗೌಡ ಇವರ ಪೈಕಿ ಒಬ್ಬರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಮತ್ತು ಚಾರ್ಟಡ್ ಅಕೌಂಟಂಟ್ ಅಶ್ವಿನ್ ಅವರ ಹೆಸರು ಪ್ರಸ್ತಾಪವಾಗಿದ್ದು ಇಲ್ಲೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಈ ಮಧ್ಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಬಿಜೆಪಿ ಒಂದು ಗುಂಪು ಯೋಚಿಸುತ್ತಿದೆ. ಆದರೆ ಒಮ್ಮತದ ಅಭಿಪ್ರಾಯಕ್ಕೆ ಬರಲು ಇದುವರೆಗೆ ಸಾಧ್ಯವಾಗಿಲ್ಲ.