ಸಭಾಪತಿ ಸಾರಥ್ಯದಲ್ಲಿ ಅರಮನೆ 'ಇತ್ಯರ್ಥ'
ಅರಮನೆ ಮೈದಾನದ ವಿವಾದಿತ ಜಮೀನನ್ನು 'ಇತ್ಯರ್ಥ' ಮಾಡಿಕೊಳ್ಳುವ ವಿಚಾರ ಮೊಟ್ಟ ಮೊದಲ ಬಾರಿಗೆ ಪ್ರಸ್ತಾಪವಾಗಿದ್ದು ಎಲ್ಲಿ ?...
ಕ.ಪ್ರ. ವಾರ್ತೆ ಬೆಂಗಳೂರು ಟಿ ಮಾ. 2
ಅರಮನೆ ಮೈದಾನದ ವಿವಾದಿತ ಜಮೀನನ್ನು 'ಇತ್ಯರ್ಥ' ಮಾಡಿಕೊಳ್ಳುವ ವಿಚಾರ ಮೊಟ್ಟ ಮೊದಲ ಬಾರಿಗೆ ಪ್ರಸ್ತಾಪವಾಗಿದ್ದು ಎಲ್ಲಿ ?
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ. ಸಾರ್ವಜನಿಕ ಜರೂರು ಸಂಗತಿ ಮೇಲೆ ಸಭಾಪತಿಗಳ ಅಧ್ಯಕ್ಷತೆಯಲ್ಲೇ ನಡೆದ ಸಭೆಯಲ್ಲೇ 'ಪರ್ಯಾಯ ಮಾರ್ಗದಲ್ಲಿ ಹೊಂದಾಣಿಕೆ ' ವಿಚಾರ ಪ್ರಸ್ತಾಪವಾಗಿದೆ.
ವಸತಿ ಸಚಿವ ವಿ.ಸೋಮಣ್ಣ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಾ.ಎಸ್.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಆರ್.ವಿ.ವೆಂಕಟೇಶ್, ಕಾರ್ಯದರ್ಶಿ ವಿ.ಶ್ರೀಶ್, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ಫಣೀಂದ್ರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಬೆಂಗಳೂರು ಜಿಲ್ಲಾಧಿಕಾರಿ ಡಾ.ಜಿ.ಸಿ.ಪ್ರಕಾಶ್, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್.ನಾಗೇಶ್, ಬೆಂಗಳೂರು ನಗರ ವಿಭಾಗ ಡಿಸಿಎಫ್ ಎ.ಜಿ.ಅಪ್ಪುರಾವ್, ಬಿಬಿಎಂಪಿ ಪಶ್ಚಿಮ ವಿಭಾಗ ಉಪ ಆಯುಕ್ತ ಎಲ್.ನಾಗರಾಜ್ ಈ ಸಭೆಯಲ್ಲಿದ್ದರು.
ಸಭೆಯ ಸಂಪೂರ್ಣ ನಡಾವಳಿಗಳು ಈಗ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಇಷ್ಟು ಮಾತ್ರವಲ್ಲ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲರೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಸಭಾಪತಿಗಳು ಈ ವಿಚಾರ ಸಂಬಂಧ ಪ್ರಸ್ತಾಪಿಸಿದ ಕೆಲ ಮುಖ್ಯಾಂಶಗಳು:
ಸಭಾಪತಿಗಳು : ಈ ವಿಚಾರವನ್ನು ನಾವು ಗಂಭೀರವಾಗಿ ಚರ್ಚೆ ಮಾಡೋಣ. ಇದನ್ನು ಉದ್ಯಾನ ಮಾಡಬೇಕೆನ್ನುವ ವಿಚಾರ ಹದಿನೈದು ವರ್ಷಗಳಿಂದ ಇದೆ. ಒಂಬತ್ತು ನ್ಯಾಯಾಧೀಶರ ವಿಭಾಗೀಯ ಪೀಠದ ಮುಂದೆ ಈ ವಿಚಾರ ಬರುವುದಕ್ಕೆ ನನ್ನ ಅನುಭವದ ಪ್ರಕಾರ ಇನ್ನೂ 15ರಿಂದ 20 ವರ್ಷಗಳು ಬೇಕು. ಆ ಸ್ಥಳಕ್ಕೆ ಸರ್ಕಾರವೂ ಒಡೆಯನಲ್ಲ, ರಾಜವಂಶಸ್ಥರೂ ಅಲ್ಲ. ಪ್ರತಿ ಬಾರಿಯೂ ಅಧಿಕಾರಿಗಳು ಕೋರ್ಟ್ಗೆ ಹೋಗಬೇಕು. ಆ ಜಾಗ ಪಾಳು ಬಿದ್ದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಕೋರ್ಟ್ ಮೂಲಕವಾಗಲಿ, ಮತ್ತೊಂದರ ಮೂಲಕವಾಗಲಿ ಮಾಲೀಕತ್ವ ಇತ್ಯರ್ಥವಾದರೆ ಒಳ್ಳೆಯದು. ಇದಕ್ಕೆ ಯಾವುದಾದರೂ ದಾರಿ ಇದ್ದರೆ ಹೇಳಿ. ನನ್ನ ಬಳಿಯೂ ಕೆಲವು ಸಲಹೆಗಳಿವೆ.
ಪ್ರಧಾನ ಕಾರ್ಯದರ್ಶಿ ಡಿಪಿಎಆರ್: ಅವರು ಸುಪ್ರೀಂ ಕೋರ್ಟ್ಗೆ ಹೋಗಿ ಯತಾಸ್ಥಿತಿ ಆದೇಶ ತಂದಿದ್ದಾರೆ. ಹೈಕೋರ್ಟ್ ಆದೇಶ ನಮ್ಮ ಪರವಾಗಿದೆ. ಟ್ರಸ್ಟಿಯಾಗಿರುವುದನ್ನು ಬಿಟ್ಟರೆ ಅವರಿಗೆ ಬೇರೆ ಹಕ್ಕು ಬರುವುದಿಲ್ಲ.
ವಿ.ಸೋಮಣ್ಣ : ಇದಕ್ಕೆ ಯಾರು ಮಾಲೀಕರು ಎಂದು ಹೇಳುವುದಕ್ಕಿಂತ ಈ ವಿಷಯವನ್ನು ಇನ್ನು ಎಷ್ಟು ವರ್ಷ ಎಳೆದುಕೊಂಡು ಹೋಗಬೇಕು ಎಂಬುದು ಈಗಿರುವ ಪ್ರಶ್ನೆ.
ಸಭಾಪತಿ : ಈಗ ಒಳ್ಳೆಯ ಅಧಿಕಾರಿಗಳು ಇದ್ದಾರೆ. ಇನ್ನಾರು ತಿಂಗಳು ಹೋದ ಮೇಲೆ ಮತ್ತೆ ಏನೇನೋ ಆಗಬಹುದು. ಹಾಗಾಗಿ ಇದು ಬಗೆ ಹರಿಯುವುದಿಲ್ಲ.
ಹೆಚ್ಚುವರಿ ಪೊಲೀಸ್ ಆಯುಕ್ತರು : ಅನುಮತಿ ಕೊಡದಿದ್ದರೆ ಯಾರೂ ಅಲ್ಲಿ ಚಟುವಟಿಕೆ ನಡೆಸುವುದಿಲ್ಲ.
ಸಭಾಪತಿಗಳು : ನೀವು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೋಗಿ. ಅದಕ್ಕೆ ತಕರಾರು ಇಲ್ಲ. ನಾವು ಸಾರ್ವಜನಿಕವಾಗಿ ಇರುವಂತವರು ಹೇಳುವುದೇನೆಂದರೆ ಇದಕ್ಕೆ ಬೇರೆ ಯಾವುದಾದರೂ ದಾರಿ ಇದೆಯೇ ? ಈ ಬಗ್ಗೆ ರಾಜಿ ಮಾಡಿಕೊಂಡು ಹೋಗುವುದಕ್ಕೆ ದಾರಿ ಇದೆಯೇ ಎಂಬುದನ್ನು ಹುಡುಕಬೇಕು.
ಪ್ರಧಾನ ಕಾರ್ಯದರ್ಶಿ ಕಾನೂನು ಇಲಾಖೆ : ಈಗಿನ ಕಾಯಿದೆಯನ್ನೇ ಉಳಿಸಿಕೊಳ್ಳಬೇಕು.
ಎಸ್.ಆರ್.ಪಾಟೀಲ್ : ಪರಿಹಾರ ಧನ ನೀಡದೇ ನಾವು ಈ ರೀತಿ ಖಾಸಗಿ ಆಸ್ತಿ ವಶಪಡಿಸಿಕೊಳ್ಳಬಹುದೇ ?
ಸೋಮಣ್ಣ : ಗೃಹ ಮಂಡಳಿಯಲ್ಲಿ 18 ವರ್ಷಗಳಿಂದ 360 ಪ್ರಕರಣಗಳಿದ್ದವು. ಕೆಲವರು ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. 970 ಎಕರೆ ಜಮೀನು ವಶಕ್ಕೆ ತೆಗೆದುಕೊಂಡು ಸಂಬಂಧಪಟ್ಟವರಿಗೆ 40-60 ನಿವೇಶನ ಕೊಟ್ಟು ಕೇಸ್ ಮುಕ್ತಾಯಗೊಳಿಸಿದ್ದೇವೆ.
ಸಭಾಪತಿಗಳು : ಅದೇ ರೀತಿ ಈ ಅರಮನೆ ಮೈದಾನದವರನ್ನು ಕರೆದು ಹೊಂದಾಣಿಕೆ ಮಾಡಲು ಸಾಧ್ಯವಿದೆಯೇ ನೋಡಿ. ಹಾಗೆ ಮಾಡಲು ಸಾಧ್ಯ ಎನ್ನುವುದಾದರೆ ಸಂಬಂಧಪಟ್ಟವರ ಜತೆ ನಾವು ನಾಲ್ಕು ಜನ ಮಾತನಾಡುತ್ತೇವೆ.
ಎಸ್.ಆರ್.ಪಾಟೀಲ್ : ಸಭಾಪತಿಯವರು ಹೇಳಿದ ಹಾಗೆ ಮಾಡಬಹುದು.
ಸಭಾಪತಿಗಳು : ಹೊಂದಾಣಿಕೆ ಮಾಡಿ ಮುಕ್ತಾಯಗೊಳಿಸಲು ಏನಾದರೂ ದಾರಿ ಇದ್ದರೆ ನೋಡಿ. ಅದರಿಂದ ಜನರಿಗೆ ಅನುಕೂಲವಾಗುವ ಹಾಗೆ ಇರಬೇಕು.
ಎಸ್.ಆರ್.ಪಾಟೀಲ್ : ಸಭಾಪತಿಯವರು ಹೇಳಿದ ಹಾಗೆ ಹೊಂದಾಣಿಕೆ ಮಾಡಿ ಮುಕ್ತಾಯಗೊಳಿಸುವುದು ಒಳ್ಳೆಯದು. ಎರಡೂ ಪಾರ್ಟಿ ಒಪ್ಪಿಕೊಳ್ಳಬೇಕಾಗುತ್ತದೆ. ಒಪ್ಪಿದರೆ ಯಾರೂ ತಡೆಯುವುದಿಲ್ಲ.
ಸಭಾಪತಿಗಳು : ಕರೆದು ಮಾತಾಡಿಸಿ ಸರಿ ಮಾಡುವುದಕ್ಕೆ ಇದೇನು ದಾಯಾದಿ ಜಗಳ ಅಲ್ಲ. ಬೆಂಗಳೂರು ನಾಗರಿಕರಿಗೆ ಅನುಕೂಲವಾಗಬೇಕು. ಹೀಗಾಗಿ ನಾಗರಿಕರು ಯೋಚನೆ ಮಾಡಬೇಕಾಗುತ್ತದೆ. ಏನಾದರೂ ವಯಾ ಮೀಡಿಯಾ ಬಗೆಹರಿಸಿ. ತಾವು ರಾಜ ವಂಶಸ್ಥರ ಜತೆ ಮಾತನಾಡುವುದಕ್ಕೆ ಒಂದು ಅವಕಾಶ ಮಾಡಿಕೊಡಿ. ಮಾತನಾಡುವುದಿದ್ದರೆ ನಾನು ಮಾತನಾಡುತ್ತೇನೆ. ಎರಡು ಪಾರ್ಟಿಯವರನ್ನು ಕರೆದು ತೀರ್ಮಾನ ಮಾಡಿ ಮುಕ್ತಾಯಗೊಳಿಸೋಣ. ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ ನಿಮಗೆ ತಿಳಿಸುತ್ತೇನೆ.
- ರಾಘವೇಂದ್ರ ಭಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.