ಸ್ಪಷ್ಟ ತೆಂಗಿನಕಾಯಿ ಚಿಹ್ನೆ ರೂಪಿಸಲು ಚು. ಆಯೋಗಕ್ಕೆ ಕೆಜೆಪಿ ಕೋರಿಕೆ
ಕ.ಪ್ರ. ವಾರ್ತೆ ಬೆಂಗಳೂರು ಮಾ. 2
ಪಕ್ಷಕ್ಕೆ ನೀಡಿ ರುವ ತೆಂಗಿನಕಾಯಿ ಚಿಹ್ನೆಯನ್ನು ಸುಧಾರಿಸಿ ಸ್ಪಷ್ಟವಾಗಿ ಗೋಚರಿಸುವಂತೆ ರೂಪಿಸಬೇಕು ಎಂದು ಕರ್ನಾಟಕ ಜನತಾ ಪಕ್ಷ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ವಿಧಾನಸಭಾ ಚುನಾವಣೆ ಪೂರ್ವಭಾವಿ ಚರ್ಚೆಗೆ ಆಗಮಿಸಿರುವ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿಗಳಿಗೆ ಈ ಕುರಿತು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯಕುಮಾರ್ ಮನವಿ ಪತ್ರ ಸಲ್ಲಿಸಿದ್ದು, ಇದರ ಜತೆಗೆ ಕಂಪ್ಯೂಟರ್ ಗ್ರಾಫಿಕ್‌ನಿಂದ ಸಿದ್ಧಪಡಿಸಿದ ತೆಂಗಿನಕಾಯಿ ಚಿಹ್ನೆಯ ಮಾದರಿಯನ್ನೂ ನೀಡಿದ್ದಾರೆ.
ನೋಂದಾಯಿತ ಆದರೆ, ಇನ್ನೂ ಮಾನ್ಯತೆ ಪಡೆಯದ ಪಕ್ಷವಾಗಿರುವ ಕೆಜೆಪಿ 2013ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಮಾಡಿದೆ. ಈ ಚುನಾವಣೆಯಲ್ಲಿ ನಮ್ಮ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ತೆಂಗಿನಕಾಯಿ ಚಿಹ್ನೆ ಕೋರುವಂತೆ ಸೂಚಿಸಲಾಗಿತ್ತು. ಆದ್ಯತೆ ಮೇಲೆ ಈ ಚಿಹ್ನೆಯನ್ನು ಪಕ್ಷದ ಅಭ್ಯರ್ಥಿಗಳಿಗೆ ನೀಡುವಂತೆ ರಾಜ್ಯ ಚುನಾವಣಾ ಆಯೋಗವನ್ನು ಕೋರಲಾಗಿತ್ತು. ಅದರಂತೆ ಎಲ್ಲಾ ಅಭ್ಯರ್ಥಿಗಳು ತೆಂಗಿನಕಾಯಿ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತೆಂಗಿನಕಾಯಿ ಚಿಹ್ನೆ ಅಸ್ಪಷ್ಟವಾಗಿದೆ. ಮಬ್ಬು ಕವಿದಂತಿರುವ ಈ ಚಿತ್ರವನ್ನು ನೋಡಿದ ತಕ್ಷಣ ತೆಂಗಿನಕಾಯಿ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಬಹುತೇಕ ಅನಕ್ಷರಸ್ಥರಿಗೆ ಈ ಚಿಹ್ನೆ ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್/ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಚಿಹ್ನೆಯನ್ನು ಅಳವಡಿಸಲು ಸ್ಪಷ್ಟವಾಗಿ ಗೋಚರಿಸುವ ಒಂದು ಇಡೀ ಮತ್ತು ಒಂದು ಅರ್ಧ ತೆಂಗಿನಕಾಯಿ ಚಿಹ್ನೆಯ ಮಾದರಿಯನ್ನು ನೀಡಿದ್ದೇವೆ. ಇದನ್ನು ಪರಿಗಣಿಸಿ ತೆಂಗಿನಕಾಯಿ ಚಿಹ್ನೆಯನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.