ಕೇಂದ್ರ ಸರ್ಕಾರದ ಅನುದಾನ ದುರುಪಯೋಗ: ಪೂಜಾರಿ
ಕ.ಪ್ರ. ವಾರ್ತೆ ಪುತ್ತೂರು ಮಾ. 3
ರಾಜ್ಯ ಸರ್ಕಾರದ ಒಳಜಗಳ, ದುರಾಡಳಿತ ಹಾಗೂ ಭ್ರಷ್ಟಾಚಾರದಿಂದಾಗಿ ಕೇಂದ್ರ ಸರ್ಕಾರವು ನಗರಾಡಳಿತದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿರುವ ಅನುದಾನವು ದುರುಪಯೋಗವಾಗಿದೆ. ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಭಾನುವಾರ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೇಂದ್ರ ಸರ್ಕಾರವು ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ ರಸ್ತೆಗಾಗಿ ಬಿಡುಗಡೆ ಮಾಡಿದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ರಸ್ತೆಯ ಕಾಂಕ್ರಿಟೀಕರಣ ಮತ್ತು ಫುಟ್ಪಾತ್ ಕಾಮಗಾರಿ ನಡೆದಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿತಗೊಂಡಿದೆ ಎಂದ ಅವರು, ಬಿಜೆಪಿಯವರಿಗೆ ಅಧಿಕಾರ ನಡೆಸಿ ಗೊತ್ತಿಲ್ಲ. ಕೇವಲ ವಿಪಕ್ಷದಲ್ಲಿ ಕುಳಿತು ಟೀಕೆ ಮಾಡಿ ಮಾತ್ರ ಅನುಭವವಿದೆ. ಇದರಿಂದಾಗಿ ಬಿಜೆಪಿ ಆಡಳಿತದಲ್ಲಿ ಜನತೆ ಸಮಸ್ಯೆ ಅನುಭವಿಸಬೇಕಾಯಿತು' ಎಂದರು.
ರಾಮ ರಾಜ್ಯದ ಹೆಸರಿನಲ್ಲಿ ಅಧಿಕಾರ ಪಡೆದುಕೊಂಡ ಬಿಜೆಪಿ ಬಳಿಕ ಆರೆಸ್ಸೆಸ್ನ ಹಿಡಿತದಲ್ಲಿ ಸಿಲುಕಿ ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಹೋಂ ಸ್ಟೇ ಹೆಸರಿನಲ್ಲಿ ಹೆಣ್ಣುಮಕ್ಕಳ ಮಾನ ತೆಗೆಯುವ, ಮಾಧ್ಯಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕೆಲಸ ಮಾಡಿದೆ ಎಂದ ಅವರು ವಿಧಾನಸಭೆಗೆ ಮಾಟ ಮಾಡಿಸುವ, ಪೊಲೀಸರಿಂದ ವಿಧಾನ ಮಂಡಲಕ್ಕೆ ದಾಳಿ ಮಾಡಿಸುವ ಮೂಲಕ ಅಶಿಸ್ತು ಮತ್ತು ಭಯದ ವಾತಾವರಣ ಮೂಡಿಸಿದೆ. ಇದರಿಂದಾಗಿ ಇದೀಗ ಬೇಸತ್ತ ಜನತೆ ಮತ್ತೊಮ್ಮೆ ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿದ್ದಾರೆ ಎಂದರು.
ಮೋದಿಯನ್ನು ಪ್ರಧಾನಿ - ಬಿಜೆಪಿಗೆ ಧೈರ್ಯವಿಲ್ಲ: ನೈತಿಕತೆ ಕಳೆದುಕೊಂಡಿರುವ ಬಿಜೆಪಿಗೆ ನರೇಂದ್ರ ಮೋದಿಯನ್ನು ಪ್ರಧಾನಿ ಆಭ್ಯರ್ಥಿಯನ್ನಾಗಿ ಬಿಂಬಿಸಲು ಧೈರ್ಯವಿಲ್ಲ. ಸ್ವತಃ ಮೋದಿಗೂ ಅಂತಹ ಧೈರ್ಯವಿಲ್ಲ ಎಂದರು ಪೂಜಾರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.