ಬೆಂಗಳೂರು: ಭಾರತದಲ್ಲಿ ಈಗ ಕೊಲೆ ಮಾಡುವುದು ಅಪರಾಧ. ಆದರೆ, ಆತ್ಮಹತ್ಯೆ ಅಪರಾಧವಲ್ಲ...
ಹೀಗೆ ಸಾಹಿತಿ ಅನಂತಮೂರ್ತಿ ಅವರಿಗೆ ಪರೋಕ್ಷವಾಗಿ ಟಾಂಟ್ ಕೊಟ್ಟವರು ಹಿರಿಯ ನಟ ಅನಂತ್‌ನಾಗ್. ಒಂದು ವೇಳೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ನಾನು ಇಲ್ಲಿ ಬದುಕಿರಲು ಇಷ್ಟಪಡಲಾರೆ ಎಂಬ ಸಾಹಿತಿ ಅನಂತಮೂರ್ತಿ ಅವರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಸಿರುವ ಅನಂತ್‌ನಾಗ್, ನಮ್ಮ ದೇಶದಲ್ಲಿ ಕೊಲೆ ಮಾಡುವುದು ಅಪರಾಧ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಲ್ಲ. ಆಯ್ಕೆ ಅನಂತಮೂರ್ತಿ ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.
ಈಟಿವಿ ವಾನಿಯ ಹೊಸ ಧಾರಾವಾಹಿ 'ಚಿಟ್ಟೆ ಹೆಜ್ಜೆ'ಯ ಪತ್ರಿಕಾಗೋಷ್ಟಿಗೆ ಆಗಮಿಸಿದ ಮಾಜಿ ಸಚಿವರೂ ಆದ ಆನಂತ್‌ನಾಗ್ ಅವರನ್ನು ಮೋದಿ ಕುರಿತು ಅನಂತಮೂರ್ತಿ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಹೀಗೆ ಉತ್ತರಿಸಿದರು.
ಎ.ಕೃಷ್ಣಪ್ಪ ಹರಕೆಯ ಕುರಿ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಎ.ಕೃಷ್ಣಪ್ಪ ಹರಕೆಯ ಕುರಿ ಎಂದು ಕಾಂಗ್ರೆಸ್ ನಾಯಕ ಹಾಗೂ ಮೈಸೂರು ಸಂಸದ ಎಚ್.ವಿಶ್ವನಾಥ್ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿಯೇ ಇದ್ದು, ಎಂ. ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ನನ್ನೊಂದಿಗೆ ಸಚಿವರಾಗಿದ್ದ ಕೃಷ್ಣಪ್ಪ ಅವರು ಮಾತುಗಾರ, ಮೋಜುಗಾರ ಹಾಗೂ ಸಂಘಟನಾ ಚತುರ. ಆದರೆ, ಸಕಲಕಲಾವಲ್ಲಭ ದೇವೇಗೌಡರ ಮುಂದೆ ಅವರ ಆಟ ಏನೂ ನಡೆಯುವುದಿಲ್ಲ ಎಂದರು. ಹಿಂದುಳಿದ ವರ್ಗದ ನಾಯಕ ಕೃಷ್ಣಪ್ಪ ಅವರನ್ನು ಜೆಡಿಎಸ್ ಅಧ್ಯಕ್ಷರಾಗಿ ಮಾಡಿರುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.