ಬೆಂಗಳೂರು: ಮುಂದಿನ ಕೆಲ ತಿಂಗಳಲ್ಲಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ತೀವ್ರ ಬದಲಾವಣೆಯ ಗಾಳಿ ಬೀಸಲಿದ್ದು, ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹೊಸಬರನ್ನು ಕರೆ ತರುವ ಪ್ರಯತ್ನ ಆರಂಭವಾಗಿದೆ.
ಹಾಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ರಾಜಕೀಯ ತಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಫೆಬ್ರವರಿ ಆರಂಭದಲ್ಲಿ ಪ್ರದೇಶ ಕಾಂಗ್ರೆಸ್‌ಗೆ ಹೊಸ ಸಾರಥಿ ನೇಮಕದ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಅಪ್ಪಾಜಿ ನಾಡಗೌಡ ಅವರನ್ನು ಈ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಸಿದ್ದು ಬಣ ಚಿಂತನೆ ನಡೆಸಿದ್ದು, ಇನ್ನೂ ಕೆಲ ಹೆಸರುಗಳು ಪ್ರಸ್ತಾಪವಾಗುತ್ತಿದೆ. ಕೆಪಿಸಿಸಿಗೆ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಈ ಬಾರಿ ಅಧಿಕೃತವಾಗಿ ಒಂದು ಅರ್ಹತಾ ಸೂತ್ರ ಪಾಲನೆಯಾಗುವ ಸಾಧ್ಯತೆ ಇದೆ. ಹಳೆ ಮೈಸೂರು ಭಾಗಕ್ಕೆ ಸೇರಿದವರು ಈಗ ಅಧ್ಯಕ್ಷರಾಗಿದ್ದಾರೆ.
ಜತೆಗ ಸಿಎಂ ಸಿದ್ದರಾಮಯ್ಯನವರೂ ಅದೇ ಪ್ರದೇಶವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಲು ಚಿಂತನೆ ನಡೆಸಲಾಗಿದೆ. ಜತೆಗೆ ರಾಜ್ಯ ಸರ್ಕಾರ ಅಹಿಂದ ವರ್ಗಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂಬ ಆರೋಪದಿಂದ ಪಾರಾಗುವ ಉದ್ದೇಶವೂ ಈ ಆಯ್ಕೆಯ ಹಿಂದೆ ಇದ್ದು ಲಿಂಗಾಯಿತ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡಲು ನಿರ್ಧರಿಸಿದೆ. ಸಿಎಂ ಹಾಗೂ ಬೆಂಬಲಿಗರ ಈ ಪ್ರಸ್ತಾಪಕ್ಕೆ ಹೈಕಮಾಂಡ್ ಹೆಚ್ಚೂ ಕಡಿಮೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕ ಭಾಗದ ಲಿಂಗಾಯಿತ ಮುಖಂಡರನ್ನೇ ಕೆಪಿಸಿಸಿ ಅಧ್ಯಕ್ಷರಾಗಿ ಮಾಡಲು ವರಿಷ್ಠರು ಮುಂದಾಗಿದ್ದರೂ ಆಕಾಂಕ್ಷಿಗಳ ಸಂಖ್ಯೆಯೇನು ಕಡಿಮೆ ಇಲ್ಲ. ವೀರಣ್ಣ ಮತ್ತೀಕಟ್ಟಿ, ನಂಜಯ್ಯನಮಠ್ ಅವರ ಹೆಸರು ಕೇಳಿ ಬರುತ್ತಿವೆ. ಸ1ಮ್ಯ ಸ್ವಭಾವದ ನಾಡಗೌಡರು ತಮ್ಮ ಜತೆ ಯಾವುದೇ ತಿಕ್ಕಾಟಕ್ಕೆ ಇಳಿಯುವುದಿಲ್ಲ ಎಂಬ ಸ್ಪಷ್ಟ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿರುವುದು ಮೂರನೆಯ ಅನಧಿಕೃತ ಸೂತ್ರ. ನಂಜಯ್ಯನಮಠ್ ಅವರನ್ನು ಈಗಾಗಲೇ ಗೃಹ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ನಾಡಗೌರ ಆಯ್ಕೆ ಹಾದಿ ಸುಗಮಗೊಳ್ಳುವ ಸಾಧ್ಯತೆ ಇದೆ.