ರಾಜಕೀಯ

ಖರ್ಗೆ ಬಳಿ 50 ಸಾವಿರ ಕೋಟಿ ಮೌಲ್ಯದ 'ಅಕ್ರಮ ಆಸ್ತಿ'..!

Srinivasamurthy VN

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ 50 ಸಾವಿರ ಕೋಟಿ ಅಕ್ರಮ ಆಸ್ತಿ ಇದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಸದಸ್ಯರೊಬ್ಬರು ಲೋಕಾಯುಕ್ತದಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಾವು ಕೇಂದ್ರ ಸಚಿವರಾಗಿದ್ದಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಕ್ರಮವಾಗಿ ಸುಮಾರು 50 ಸಾವಿರ ಕೋಟಿ ಮೌಲ್ಯದ ಆಸ್ತಿಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯದ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ರತ್ನಾಕರ ಎಂಬುವವರು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಪರಿಶಿಷ್ಟಜಾತಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು 1, 427 ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್‌ಗಳನ್ನು ಅಕ್ರಮವಾಗಿ ನೇಮಕ ಮಾಡಿದ್ದಾರೆ. 1980ರಿಂದ ಕಂದಾಯ ಸಚಿವರಾಗಿದ್ದ ಖರ್ಗೆ ಭಾರಿ ಪ್ರಮಾಣದ ಸಂಪತ್ತು ಗಳಿಸಿದ್ದು, ಅದರ ಮೊತ್ತ 50 ಸಾವಿರ ಕೋಟಿಗಳಷ್ಟಾಗುತ್ತದೆ ಎಂದು ರತ್ನಾಕರ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಖರ್ಗೆ ಅವರು ಬನ್ನೇರುಘಟ್ಟದಲ್ಲಿ 500 ಕೋಟಿ ರು. ಮೌಲ್ಯದ ಬೃಹತ್ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 1000 ಕೋಟಿ ಮೌಲ್ಯದ 300 ಎಕರೆ ವಿಸ್ತೀರ್ಣದ ಕಾಫಿ ತೋಟ, 50 ಕೋಟಿ ಮೌಲ್ಯದ ಒಂದು ಮನೆ, ಬೆಂಗಳೂರಿನ ಕೆಂಗೇರಿಯಲ್ಲಿ 40 ಎಕರೆ ವಿಸ್ತೀರ್ಣದ ತೋಟದ ಮನೆ, ಎಂಎಸ್ ರಾಮಯ್ಯ ಮಹಾವಿದ್ಯಾಲಯದ ಸಮೀಪ 25 ಕೋಟಿ ಮೌಲ್ಯದ ಒಂದು ಕಟ್ಟಡ, ಆರ್‌ಟಿ ನಗರದಲ್ಲಿ ಒಂದು ಮನೆ, ಬಳ್ಳಾರಿ ರಸ್ತೆಯಲ್ಲಿ 17 ಎಕರೆ ವಿಸ್ತೀರ್ಣದ ಭೂಮಿ, ಇಂದಿರಾನಗರದಲ್ಲಿ ಮೂರು ಅಂತಸ್ತುಗಳ ಒಂದು ಕಟ್ಟಡ, ಸದಾಶಿವ ನಗರದಲ್ಲಿ 2 ಮನೆಗಳು ಮತ್ತು ಇತರೆ ಆಸ್ತಿಗಳನ್ನು ಹೊಂದಿದ್ದಾರೆ.

ಇದಲ್ಲದೆ ದೇಶದ ವಿವಿಧ ನಗರಗಳಲ್ಲಿ ಆಸ್ತಿ ಮಾಡಿದ್ದು, ಮೈಸೂರು, ಕಲಬುರಗಿ, ಚೆನ್ನೈ, ಗೋವಾ, ಪುಣೆ, ನಾಗಪುರ, ಮುಂಬೈ ಮತ್ತು ದೆಹಲಿಯಲ್ಲಿ ಆಸ್ತಿ ಹೊಂದಿದ್ದಾರೆ. ಕೆಲವು ಆಸ್ತಿಗಳು ಗಂಡುಮಕ್ಕಳು, ಹೆಣ್ಣುಮಕ್ಕಳು, ಅಳಿಯ ಮತ್ತು ಪತ್ನಿ ಹೆಸರಿನಲ್ಲಿದೆ ಎಂದು ರತ್ನಾಕರ ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಬಿ.ರತ್ನಾಕರ ಅವರು ಸಲ್ಲಿಸಿರುವ ಈ ದೂರನ್ನು ಪ್ರಸ್ತುತ ರಾಯಚೂರು ಲೋಕಾಯುಕ್ತ ಘಟಕ ಪರಿಶೀಲನೆಗೆ ತೆಗೆದುಕೊಂಡಿದ್ದು, ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತ ಅಧಿಕಾರಿಗಳು ದೂರಿನಲ್ಲಿರುವ ಆರೋಪ ಕುರಿತು ತನಿಖೆ ನಡೆಸುತ್ತಿದ್ದೇವೆ. ಆರೋಪ ನಿಜವಾಗಿದ್ದರೆ ಎಫ್‌ಐಆರ್ ದಾಖಲಿಸಿ, ದೂರು ನೋಂದಾಯಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಾರೆ ಕೇಂದ್ರಮಟ್ಟದಲ್ಲಿ ಪ್ರಸ್ತುತ ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಲೋಕಾಯುಕ್ತ ತನಿಖೆ ತಲೆಬಿಸಿ ಆರಂಭವಾಗಿದೆ.

SCROLL FOR NEXT