ವಿಜಯಾಪುರ: ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಕ್ಕೆ ತಮ್ಮಿಂದ ಯಾವುದೇ ಅಡ್ಡಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆ ಬಿಟ್ಟಿದ್ದು. ತಾನು ಅಡ್ಡಿಯಾಗಿದ್ದೇನೆಂದು ಎದ್ದಿರುವ ಪುಕಾರು ಶುದ್ಧ ಸುಳ್ಳು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ತಾವು ಡಿಸಿಎಂ ಸೇರಿದಂತೆ ಯಾವುದೇ ಸ್ಥಾನಮಾನ ಕೇಳಿಲ್ಲ. ತಮ್ಮ ಬೆಂಬಲಿಗರು ತಮಗೆ ಡಿಸಿಎಂ ಹುದ್ದೆ ನೀಡುವಂತೆ ಕೇಳಿರಬಹುದು. ಆದರೆ ಈ ರೀತಿ ತಾವು ಯಾರಿಂದಲೂ ಹೇಳಿಸಿಲ್ಲ . ತಾವು ಸಚಿವ ಸ್ಥಾನವನ್ನಾಗಲಿ, ಡಿಸಿಎಂ ಹುದ್ದೆಯನ್ನಾಗಲಿ ಕೇಳಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ತಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಸಹೋದರರಂತೆ ಇದ್ದೇವೆ ಎಂದು ಪರಮ್ ತಿಳಿಸಿದರು.
ಸರ್ಕಾರದ ರಾಜಿ ಇಲ್ಲ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಅತ್ಯಾಚಾರಿಗಳಿಗೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆಯಾಗಲೇಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ತೀರ್ಥಹಳ್ಳಿ ಅತ್ಯಾಚಾರ ಪ್ರಕರಣದ ತನಿಖೆ ನಡೆದಿದೆ. ಉಳಿದಂತೆ ರಾಜ್ಯದಲ್ಲಿ ಘಟಿಸಿದ ಅತ್ಯಾಚಾರ ಪ್ರಕರಣಗಳಲ್ಲಿನ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರತಿಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡದೇ ಆಡಳಿತ ಪಕ್ಷದ ಜತೆಗೆ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕೈ ಜೋಡಿಸಬೇಕು ಎಂದರು.
ಇತ್ತೀಚೆಗೆ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅತ್ಯಾಚಾರ ಪ್ರಕರಣಗಳ ಬಗ್ಗೆ ಹೇಳಿಕೆ ನೀಡಿರುವುದು ಯಾರಿಗೂ ಶೋಭೆ ತರುವುದಿಲ್ಲ. ಅದೇ ರೀತಿ ತಮ್ಮ ಪಕ್ಷದ ಶಾಸಕ ಐವಾನ್ ಡಿಸೋದಾ ಅವರು ಸುಸಂಸ್ಕೃತವಲ್ಲದ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಈಗಾಗಲೇ ತಮ್ಮ ಶಾಸಕರಿಗೆ ನೋಟಿಸ್ ನೀಡಲಾಗಿದೆ. ಯಾರೇ ಆಗಲಿ ಈ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಅನಧಿಕೃತ ಶಾಲೆ ಮುಚ್ಚಲು ಕ್ರಮ : ಅನಧಿಕೃತ ಶಾಲೆಗಳನ್ನು ಮುಚ್ಚುವಂತೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಸೂಚಿಸಲಾಗಿದೆ. ಅನಧಿಕೃತ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವ ಮೂಲಕ ಶಿಕ್ಷಣ ಇಲಾಖೆ ನಿಯಮಾವಳಿಗಳನ್ನು ಉಲ್ಲಂಘಿಸಿವೆ. ಇಂಥ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಇದು ಬರೀ ತಮ್ಮ ಸರ್ಕಾರ ಅಧಿಕಾರಾವಧಿಯಲ್ಲಿ ಮಾತ್ರ ನಡೆದಿಲ್ಲ. ಎಲ್ಲ ಸರ್ಕಾರ ಕಾಲಾವಧಿ ಯಲ್ಲೂ ಅನಧಿಕೃತ ಶಾಲೆಗಳು ತಲೆ ಎತ್ತಿವೆ ಎಂದರು.