ರಾಜಕೀಯ

ಟಿಆರ್‌ಪಿಗಾಗಿ ನನ್ನ ವಿರುದ್ಧ ಸುದ್ಧಿ: ದಿನೇಶ್ ಗುಂಡೂರಾವ್

Srinivasamurthy VN

ಮಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಎದುರಿಸುತ್ತಿರುವ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಸುದ್ದಿ ಮಾಧ್ಯಮಗಳು ತಮ್ಮ ಟಿಆರ್‌ಪಿಗಾಗಿ ನಮ್ಮ ವಿರುದ್ಧದ ಆರೋಪವನ್ನು ಪದೇ ಪದೇ ಬಿತ್ತರಿಸುತ್ತಿವೆ. ತಮ್ಮ ವಿರುದ್ಧದ ಆರೋಪಗಳು ಕೇವಲ ಊಹಾಪೋಹಗಳಾಗಿದ್ದು, ಸುಖಾ ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

'ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ನಿರಾಧಾರವಾಗಿದ್ದು, ಯಾವುದೇ ವ್ಯಕ್ತಿಯ ಹೇಳಿಕೆ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಬೆಲೆ ನೀಡಿ ಮಾಧ್ಯಮಗಳು ಒಂದೇ ಸಮನೆ ತಮ್ಮ ವಿರುದ್ಧದ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ತಮ್ಮ ಮಾನಹಾನಿ ಮಾಡುತ್ತಿವೆ. ಯಾವುದೇ ಒಂದು ಸುದ್ದಿ ಪ್ರಸಾರ ಮಾಡುವ ಮುನ್ನ ಆ ಸುದ್ದಿಯ ಪೂರ್ವಾಪರಗಳನ್ನು ಪರಿಶೀಲಿಸಿ ಬಳಿಕ ಪ್ರಸಾರ ಮಾಡಬೇಕು. ಸಮಾಜದಲ್ಲಿ ಮಾಧ್ಯಮಗಳಿಗೆ ತಮ್ಮದೇ ಆದ ಸ್ಥಾನವಿದ್ದು, ಅದಕ್ಕೆ ಕುಂದು ಬರುವಂತೆ ಮಾಧ್ಯಮಗಳು ನಡೆದುಕೊಳ್ಳಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.

ಹಿರೇಮಠ್ ವಿರುದ್ಧ ತೀವ್ರ ವಾಗ್ದಾಳಿ
ಇದೇ ವೇಳೆ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್‌ಆರ್ ಹಿರೇಮಠ ಅವರ ವಿರುದ್ದ ಹರಿಹಾಯ್ದ ದಿನೇಶ್ ಗುಂಡೂರಾವ್ ಅವರು, ಹಿರೇಮಠ್ ಅವರು ಯಾವುದೋ ಹಿಡನ್ ಅಜೆಂಡಾವನ್ನು ಇಟ್ಟುಕೊಂಡು ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರೇನು ಸಾಚಾ ವ್ಯಕ್ತಿಯಲ್ಲ. ಅವರ ಹಿನ್ನಲೆ ತಮಗೆ ಗೊತಿದೆ ಎಂದು ಹಿರೇಮಠ್ ಅವರಿಗೆ ಟಾಂಗ್ ನೀಡಿದರು. ಅಲ್ಲದೆ ನನ್ನ ವಿರುದ್ಧ ಆರೋಪಗಳ ಕುರಿತಂತೆ ಮಾಧ್ಯಮಗಳು ಹಿರೇಮಠ್ ಅವರನ್ನು ಕೂರಿಸಿಕೊಂಡು ಅವರನ್ನು ಹಿರೋ ಮಾಡಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.

SCROLL FOR NEXT