ನಂಜನಗೂಡು: `ಹಕೀಂ ನಂಜುಂಡ' ಎಂಬ ಖ್ಯಾತನಾಮ ಮತ್ತೊಮ್ಮೆ ನಂಜನಗೂಡು ಶ್ರೀಕಂಠೇಶ್ವರ ದೇವರ ಸನ್ನಿಧಿ ಯಲ್ಲಿ ಅನ್ವರ್ಥಗೊಂಡಿತು. ಇದಕ್ಕೆ ಕಾರಣರಾದವರು
ರಾಜ್ಯದ ಮೂಲಭೂತ ಸೌಲಭ್ಯ ಅಭಿವೃದ್ಧಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಹಜ್ ಸಚಿವ ಆರ್. ರೋಷನ್‍ಬೇಗ್. ಶ್ರೀಕಂಠೇಶ್ವರ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಅಭಿಷೇಕ, ಪೂಜೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಬೇಗ್ ಶ್ರೀಕಂಠೇಶ್ವರನ ಅಂತರಂಗ ಭಕ್ತರಾಗಿದ್ದು, ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಇದೇನು ಮೊದಲಲ್ಲ. ಹಿಂದೆಯೂ ಹಲವಾರು ಬಾರಿ ಬಂದು ದರ್ಶನ ಪಡೆದಿದ್ದಾರೆ. ಈಗ ಸಚಿವರಾಗಿ ಬಂದಿರುವುದರಿಂದ ಮಹತ್ವ ದೊರೆತಿದೆ ಎನ್ನುತ್ತಾರೆ ಅವರ ಆಪ್ತರು.ಸಚಿವರ ಆಗಮನದ ಮಾಹಿತಿ ಮೊದಲೇ ತಿಳಿದಿದ್ದರಿಂದ ಅರ್ಚಕರು ಅರ್ಧ ಗಂಟೆ ಕಾದು ಕ್ಷೀರ ಮತ್ತು ಶಾಲ್ಯಾನ್ನದ ಅಭಿಷೇಕ ನೆರವೇರಿಸಿದರು. ಸಚಿವರು ತಮ್ಮ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ಸಂಕಲ್ಪಪೂರ್ವಕ ಅರ್ಚನೆ ಮಾಡಿಸಿದರು. ಮಂಗಳಾರತಿ, ತೀರ್ಥ ಸ್ವೀಕರಿಸಿದ ಸಚಿವರಿಗೆ ದೇವರ ಶೇಷವಸuಉ ಹಾಕಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೇಗ್ ರು.2000 ಕಾಣಿಕೆ ಅರ್ಪಿಸಿದರು. ನಂತರ ಸಚಿವರು ನೇರವಾಗಿ ಅಮ್ಮನವರ ಗರ್ಭಗುಡಿಯ ಪಕ್ಕದಲ್ಲಿರುವ ಟಿಪ್ಪುಸುಲ್ತಾನ್ ಸ್ಥಾಪಿಸಿದ ಪಚ್ಚೆಲಿಂಗ ಮತ್ತು ಬಿಲ್ವಮರದ ಬಳಿ ತೆರಳಿ ದರ್ಶನ ಮಾಡಿದರು.
ದೇವಾಲಯದಿಂದ ಹೊರಬಂದ ಬಳಿಕ ಸುದ್ದಿಗಾರರಿಗೆ ಕೈ ಮುಗಿದು ಅಧಿಕೃತ ಕಾರನ್ನು ಹತ್ತಿ ಮೈಸೂರಿಗೆ ನಡೆದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಸ್.
ಮೋಹನ್, ತಹಸೀಲ್ದಾರ್ ಎಚ್. ರಾಮಪ್ಪ, ಸ್ಥಳ ಪುರೋಹಿತ ಸಪ್ತ ಋಷಿಜೋಯಿಸ್, ಎಸ್.ಐ. ಚೇತನ್ ಇದ್ದರು.
ಹಕೀಂ ಹೆಸರು ಬಂದದ್ದು ಹೇಗೆ? ನಂಜನಗೂಡು ನಂಜುಂಡೇಶ್ವರನಲ್ಲಿ ಸಚಿವ ರೋಷನ್‍ಬೇಗ್ ಭಕ್ತಿ, ವಿಶ್ವಾಸ ಹೊಂದಿರುವುದರಲ್ಲಿ ಅಂತಹ ಮಹತ್ವವೇನೂಹುಡುಕಬೇಕಿಲ್ಲ. ನಂಜುಂಡೇಶ್ವರನ ಮತ್ತೊಂದು ಹೆಸರೇ ಹಕೀಂ ನಂಜುಂಡ. ಪಟ್ಟದ ಆನೆಗೆ ಕಣ್ಣು ಹೋದಾಗ, ಮೈಸೂರು ಹುಲಿ ಟಿಪ್ಪುಸುಲ್ತಾನ ನಂಜುಂಡೇಶ್ವರನಲ್ಲಿ ಹರಕೆ ಹೊತ್ತನಂತೆ. ಆನೆಗೆ ಕಣ್ಣು ಬಂತು. ಸುಪ್ರೀತನಾದ ಸುಲ್ತಾನ ದೇವಾಲಯದಲ್ಲಿ ಪಚ್ಚೆಲಿಂಗ ಸ್ಥಾಪಿಸಿ, ಉತ್ಸವ ಮೂರ್ತಿಗೆ ಪಚ್ಚೆ ಕಂಠಿಹಾರ, ಬೆಳ್ಳಿ ಬಟ್ಟಲುಗಳನ್ನು ಕಾಣಿಕೆಯಾಗಿ ನೀಡಿದ. ಅವುಗಳನ್ನು ಈಗಲೂ ಗಿರಿಜಾ ಕಲ್ಯಾಣ ಸಂದರ್ಭದಲ್ಲಿ ಬಳಸಲಾಗುತ್ತದೆ. ಸ್ಥಳೀಯರೂ ಸೇರಿದಂತೆ ನಾಡಿನ ಹಲವೆಡೆ ಯಿಂದ ಮುಸಲ್ಮಾನರು ದೇವಾಲಯಕ್ಕೆ ಭೇಟಿ ನೀಡಿ, ಪಚ್ಚೆಲಿಂಗ ದರ್ಶನ ಮಾಡಿ ಪ್ರಾರ್ಥಿಸುವುದು ನಡೆದು ಬಂದಿದೆ. ಅಂದು ಹಕೀಂ ನಂಜುಂಡನೆನಿಸಿಕೊಂಡ ಶಿವ, ಇವತ್ತಿನ
ಮಟ್ಟಿಗೆ ರೋಷನ್ ನಂಜುಂಡ ಎನಿಸಿಕೊಂಡನೇ?