ರಾಜಕೀಯ

ಕಾಂಗ್ರೆಸ್ ಮುಕ್ತ ಮನಸ್ಥಿತಿ ನಿರ್ಮಾಣ

Vishwanath S

ಬೆಂಗಳೂರು: ಕಾಂಗ್ರೆಸ್ ಮುಕ್ತ ಮನಸ್ಥಿತಿ ನಿರ್ಮಿಸಬೇಕಾಗಿದೆ ಎಂದು ಬಿಜೆಪಿ ವರಿಷ್ಠ ರಾಜನಾಥ ಸಿಂಗ್ ಕರೆಕೊಟ್ಟಿದ್ದಾರೆ. `ಕಾಂಗ್ರೆಸ್ ಮುಕ್ತ ಭಾರತ' ಎಂದರೆ ಕೇವಲ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸುವುದಲ್ಲ. ಬದಲಾಗಿ ಆ ಪಕ್ಷ ಅಧಿಕಾರವಿದ್ದ ಕಡೆಯ ಆಡಳಿತ ವ್ಯವಸ್ಥೆಯಲ್ಲಿರುವ `ಮನಸ್ಥಿತಿ'ಯನ್ನೂ ಬದಲಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶನಿವಾರ ರಾಜಕೀಯ ನಿರ್ಣಯ ಮಂಡಿಸಿ, ಭೂಸ್ವಾಧೀನ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳಲ್ಲಿ ವಿನಾಕಾರಣ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ. ಈ ಟೀಕೆಗಳಿಗೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜನ ಬೆಂಬಲವಿರುವ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಕಾಂಗ್ರೆಸ್ ಯೋಜನೆ ಫಲಿಸದು ಎಂದರು.

10 ತಿಂಗಳ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳನ್ನು ಸ್ವಾಗತಿಸಿದ ಅವರು, `ಸರ್ಕಾರ ಆರಂಭದಲ್ಲೇ ಇಟ್ಟ ಹೆಜ್ಜೆಗಳಿಂದ ಇಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆಗಳಿಸಿದೆ. ಅನೇಕ ಮುಂದುವರಿದ ದೇಶಗಳೊಡನೆ ಸರಿಸಮ ನಾದ ಮಾನ್ಯತೆ ಸಿಗುತ್ತಿದೆ' ಎಂದು ಬಣ್ಣಿಸಿದರು.

ಸರ್ಕಾರ ಬಂದಾಗಿನಿಂದಲೂ ಪಾರದರ್ಶಕ ಆಡಳಿತ ಎಂದರೆ ಏನೆಂದು ಪರಿಚಯಿಸುತ್ತಿದೆ. ಕಾಂಗ್ರೆಸ್ ಆಡಳಿತವನ್ನು ಕಂಡಿದ್ದ ಜನ ತಕ್ಷಣ ಬದಲಾವಣೆಯನ್ನು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದು ಬಿಜೆಪಿ ಗಮನದಲ್ಲಿ ಇದೆ.

ಹಾಗೆಯೇ ಬದಲಾವಣೆಗಳು ರಾತ್ರೋರಾತ್ರಿ ಆಗುವುದೂ ಅಲ್ಲ. ಬಡವರ ಕಲ್ಯಾಣ ಮಾಡುತ್ತೇವೆ ಎಂದು ಗರೀಬಿ ಹಟಾವೋ ಎಂದ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್‍ನ ಆಡಳಿತ ಬಡತವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ನಾವು ಬಂದ ಮೇಲೆ ಜನ್‍ಧನ್ ನಂತಹ ಯೋಜನೆ ಮೂಲಕ ಬಡವರನ್ನು ನೇರವಾಗಿ ತಲುಪುವ ಯೋಜನೆಗಳನ್ನು ಜಾರಿಗೆ ತಂದು ಪರಿಸ್ಥಿತಿ ಬದಲಾವಣೆಗೆ ಹೆಜ್ಜೆ ಇಟ್ಟಿದ್ದೇವೆ ಎಂದರು.

SCROLL FOR NEXT