ವಿಧಾನಪರಿಷತ್ತು: ಬಿಬಿಎಂಪಿ ವಿಭಜನೆ ಮಾಡುವುದಕ್ಕೂ ಮುನ್ನ ಸರ್ಕಾರ ಜನಾಭಿಪ್ರಾಯವನ್ನು ಸಂಗ್ರಹಿಸಲಿದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರ ಪಾಲಿಕೆ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ, ಸರ್ಕಾರ ಏಕಾಏಕಿ ಬಿಬಿಎಂಪಿಯನ್ನು ವಿಭಜನೆ ಮಾಡುವುದಿಲ್ಲ. ಈ ಬಗ್ಗೆ ಜನರಿಂದ ಅಭಿಪ್ರಾಯವನ್ನೂ ಸಂಗ್ರಹ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಬಿಬಿಎಂಪಿಯನ್ನು ಮೂರು ಭಾಗವನ್ನಾಗಿ ವಿಭಜಿಸುತ್ತದೆ. ಇದರಿಂದ ಕನ್ನಡ, ತಮಿಳು, ತೆಲುಗು ಎಂದೆಲ್ಲಾ ಭಾಷಿಗರು ವಿಭಜನೆಯಾಗುತ್ತಾರೆ ಎನ್ನುವುದು ಬರೀ ಊಹೆ.
ಬೆಂಗಳೂರಿನಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಸೌಲಭ್ಯಸಿಗಬೇಕು. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಮರ್ಥ ಆಡಳಿತ ನಡೆಸುವಂತಾಗಬೇಕು. ಈ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತೇನೆ. ಆನಂತರ ಬಿಬಿಎಂಪಿಯನ್ನು ಎರಡು ಭಾಗವಾಗಿ ಮಾಡಬೇಕೇ ? ಅಥವಾ ಮೂರು ಭಾಗವಾಗಿ ವಿಂಗಡಿಸಬೇಕೇ ಎಂದು ನಿರ್ಧರಿಸಲಾಗುತ್ತದೆ ಎಂದು ಅವರು ಸದನಕ್ಕೆ ಹೇಳಿದರು.
ಗೆಲ್ಲುವುದೇ ಕಾಂಗ್ರೆಸ್: ಸದ್ಯ ಚುನಾವಣೆ ನಡೆದರೆ ಕಾಂಗ್ರೆಸ್ ಸೋಲುತ್ತದೆ ಎಂದು ಒಂದು ಅಧ್ಯಯನ ವರದಿ ಬಂದಿದೆ. ಆ ಬಗ್ಗೆ ಮುಖ್ಯಮಂತ್ರಿ ಅವರು ಪ್ರಸ್ತಾಪಿಸಬೇಕೆಂದು ಬಿಜೆಪಿಯ ಗೋ.ಮಧುಸೂದನ್ ಕೆಣಕಿದರು. ಆಗ ಸಿಟ್ಟಾದ ಸಿದ್ದರಾಮಯ್ಯ, ಯಾವಾಗ ಚುನಾವಣೆ ನಡೆದರೂ ಗೆಲ್ಲುವುದು ಕಾಂಗ್ರೆಸ್ ಪಕ್ಷವೇ ಎಂದು ಹೇಳಿದರು. ತಕ್ಷಣ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಈಶ್ವರಪ್ಪ, ಪ್ರತಿಪಕ್ಷಗಳು ಸ್ಪಷ್ಟೀಕರಣ ಕೇಳಿದಾಗ ಉತ್ತರ ನೀಡಿ ಎಂದರೆ ಇಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡಬೇಡಿ. ಇದು ಸರಿಯಲ್ಲ. ನಾನು ನಿಮಗೆ ಸವಾಲು ಹಾಕುತ್ತೇನೆ. ಮುಂದಿನ ಚುನಾವಣೆಯಲ್ಲಿ ನೀವು ಸೋಲುವುದು ಖಚಿತ. ಮುಖಮಂತ್ರಿ ಸ್ಥಾನ ಹೋಗುವುದೂ ಖಚಿತ ಎಂದರು.
ಶೆಟ್ಟರ್ ನಿರ್ಧಾರ ಸರ್ಕಾರದ್ದಲ್ಲ: ಈಶ್ವರಪ್ಪ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಆಗಿನ ಸಿಎಂ ಜಗದೀಶ್ ಶೆಟ್ಟರ್ ಬಿಬಿಎಂಪಿ ವಿಭಜನೆಯಾಗಬೇಕೆಂದು ಹೇಳಿದ್ದರೆ ಅದು ಅವರ ವಯುಕ್ತಿಕ ಅಭಿಪ್ರಾಯವಾಗಿತ್ತು ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಪ್ರತಿಪಾದಿಸಿದ್ದಾರೆ. ಸದನದಲ್ಲಿ ಸಿಎಂ ಬಿಬಿಎಂಪಿ ವಿಭಜನೆ ಬರೀ ಕಾಂಗ್ರೆಸ್ ಸರ್ಕಾರದ ಪ್ರಸ್ತಾಪವಲ್ಲ. ಹಿಂದಿನ ಸರ್ಕಾರವಿದ್ದಾಗಲೇ ಆಗಿನ ಸಿಎಂ ಶೆಟ್ಟರ್, ವಿಭಜನೆ ಅಗತ್ಯ ಎಂದಿದ್ದರು. ಅಂದಿನ ನಗರಾಭಿವೃದ್ಧಿ ಸಚಿವ ಸುರೇಶ್‍ಕುಮಾರ್ ಕೂಡ ವಿಭಜನೆ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ ಎಂದು ಬಿಜೆಪಿಯನ್ನು ಚುಚ್ಚಿದರು.
ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುಖ್ಯ ಮಂತ್ರಿ ಮತ್ತು ಸಚಿವರು ಹೇಳಿದ ಹೇಳಿಕೆಗಳೆಲ್ಲವೂ ಆದೇಶವಲ್ಲ. ಸಂಪುಟದಲ್ಲಿ ನಿರ್ಧರಿಸಿ, ಸದನದಲ್ಲಿ ತೀರ್ಮಾನಿಸಿದಾಗ ಮಾತ್ರ ಅದು ಕಾನೂನು ಆಗುತ್ತದೆ. ಆದರೆ ಶೆಟ್ಟರ್ ಯಾವುದೋ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದನ್ನೇ ಸರ್ಕಾರದ ನಿರ್ಧಾರ ಎನ್ನುವುದು ಸರಿಯಲ್ಲ ಎಂದು ಈಶ್ವರಪ್ಪ ರೇಗಾಡಿದರು
ಈಶ್ವರಪ್ಪ ಪ್ರೀತಿ, ದ್ವೇಷದ ಗೆಳೆಯ
ಅದೇನೋ ಈಶ್ವರಪ್ಪ ಅವರು ನನಗೆ ಒಂದು ರೀತಿಯಲ್ಲಿ ಪ್ರೀತಿಯ ಮತ್ತು ದ್ವೇಷದ ಆತ್ಮಿಯ ಸ್ನೇಹಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗೇಲಿ ಮಾಡಿದರು. ಸದನದಲ್ಲಿ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆಯುತ್ತಿದ್ದಾಗ, ಸಿದ್ದರಾಮಯ್ಯ ಜೆಡಿಎಸ್ನ ಬಸವರಾಜ ಹೊರಟ್ಟಿ ಅವರನ್ನು ಮಾತಿಗೆ ಎಳೆದರು.
ಬಸವರಾಜು ಹೊರಟ್ಟಿ ನನಗೆ ಒಳ್ಳೇ ಸ್ನೇಹಿತ. ಆದರೆ ಹೊರಗಿನಿಂದ ಇನ್ ಸ್ಟ್ರಕ್ಷನ್ ಇರುತ್ತದೆ. ಆದ್ದರಿಂದ ಅವರು ನನ್ನ ಪರವಾಗಿ ಮಾತನಾಡುವುದಿಲ್ಲ ಎಂದರು. ಹಾಗಿದ್ದರೆ ಆಪ್ತ ಸ್ನೇಹಿತರು ಮತ್ತ್ಯಾರು ಎನ್ನುವ ವಿಚಾರ ಪ್ರಸ್ತಾಪವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಹೊರಟ್ಟಿ, ಬಿಜೆಪಿಯ ಕೆ.ಬಿ.ಶಾಣಪ್ಪ ಅವರು ಆಪ್ತ ಸ್ನೇಹಿತರು. ಆದರೆ ಈಶ್ವರಪ್ಪ ಮಾತ್ರ ಪ್ರೀತಿಯ ಮತ್ತು ದ್ವೇಷದ ಸ್ನೇಹಿತ ಎಂದು ಹಾಸ್ಯ ಮಾಡಿದರು.