ಬೆಂಗಳೂರು: ಬೆಂಗಳೂರು ಮಹಾನಗರಕ್ಕೆ ಸ್ಮಾರ್ಟ್ ಸಿಟಿ ಅವಕಾಶ ತಪ್ಪಿರುವುದಕ್ಕೆ ಮುಖ್ಯಮಂತ್ರಿಗಳೇ ಹೊಣೆ ಎಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ತಿರುಗೇಟು ನೀಡಿರು ಸಿಎಂ ಸಿದ್ದರಾಮಯ್ಯ, ಅನಂತ್ ಕುಮಾರ್ ಹೇಳಿಕೆ ಬೇಜವಾಬ್ದಾರಿತನದ್ದು ಎಂದಿದ್ದಾರೆ.
ಆನಂತ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಸ್ಮಾರ್ಟ್ ಸಿಟಿ ಯೋಜನೆ ಬೆಂಗಳೂರು ಆಯ್ಕೆಗೊಳ್ಳದಿರಲು ತಾಂತ್ರಿಕ ಕಾರಣ ಇದೆ. ಅವರ ಹೇಳಿಕೆ ಬೇಜವಾಬ್ದಾರಿತನದ್ದಾಗಿದ್ದು, ಇದೊಂದು ಚುನಾವಣಾ ಗಿಮಿಕ್ ಎಂದರು.
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಬಿಬಿಎಂಪಿಯಲ್ಲಿ ಬಿಜೆಪಿ ಕಳೆದ ಐದು ವರ್ಷಗಳಿಂದ ದುರಾಡಳಿತ ನಡೆಸಿದ್ದು, ಈ ಬಗ್ಗೆ ಜನತಾ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಕೊಡುತ್ತೇವೆ ಎಂದರು.
ನಗರಕ್ಕೆ ಸ್ಮಾರ್ಟ್ ಸಿಟಿ ತಪ್ಪಿಸುವ ಘೋರ ಅಪರಾಧವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ನಿನ್ನೆ ಅನಂತ ಕುಮಾರ್ ಗಂಭೀರ ಆರೋಪ ಮಾಡಿದ್ದರು.
ಸ್ಮಾರ್ಟ್ ಸಿಟಿಯೋಜನೆಗೆ ಬೆಂಗಳೂರನ್ನು ಸೇರಿಸುವಂತೆ ರಾಜ್ಯ ಸರ್ಕಾರದಿಂದ ಯಾವುದೇ ಮನವಿ ಬಂದಿಲ್ಲ. ತೆರಿಗೆ ವಸೂಲಾತಿ ಹಾಗೂ ಕೇಂದ್ರದ ಯೋಜನೆಗಳ ಅನುಷ್ಠಾನಗಳನ್ನು ಮುಂದಿನ ದಿನದಲ್ಲಿ ಸರಿಯಾಗಿ ನಿರ್ವಹಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಪತ್ರ ಬರೆಯುವ ಮೂಲಕ ಬೆಂಗಳೂರನ್ನು ಸ್ಮಾರ್ಟ್ ಸಿಟಿಗೆ ಸೇರಿಸಿಕೊಳ್ಳಲು ಮನವಿ ಮಾಡಬಹುದಾಗಿತ್ತು. ಆದರೆ ರಾಜಕೀಯ ಉದ್ದೇಶಕ್ಕೆ ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಲ್ಲ ಎಂದು ಅನಂತ್‌ಕುಮಾರ್ ಟೀಕಿಸಿದ್ದರು.