ಬೆಂಗಳೂರು: ಸದಾ ಜನಜಗುಳಿಯಿಂದ ಕೂಡಿದ್ದ ಕಚೇರಿಯಲ್ಲಿ ಈಗ ನೀರವ ಮೌನ. ಜನರ ಕಷ್ಟ, ನೋವುಗಳಿಗೆ ಸ್ಪಂದಿಸಬೇಕಾದ, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾದ ಸಂಸ್ಥೆ ಇಂದು ಒಡೆಯನಿಲ್ಲದ ಮನೆಯಂತಾಗಿದೆ. ಸಿಬ್ಬಂದಿ ಮೌನಕ್ಕೆ ಶರಣಾಗಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ, ದುರಾಡಳಿತಗಾರರಿಗೆ ಒಂದು ಕಾಲದಲ್ಲಿ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಕಚೇರಿ ಬುಧವಾರ ಕಂಡಿದ್ದು ಹೀಗೆ. ಹೌದು, ಲೋಕಾಯುಕ್ತ ಕಚೇರಿಯಲ್ಲಿ ಇಂದು ದೂರುದಾರರೇ ಇಲ್ಲ. ಲೋಕಾಯುಕ್ತ ಪೊಲೀಸರು ನಡೆಸುವ ದಾಳಿ ಪ್ರಮಾಣವೂ ಕ್ಷೀಣಿಸಿದೆ. ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಅಡಿ ಅಶ್ವಿನ್ ರಾವ್ ಬಂಧನ ಆಗಿದ್ದು ಜುಲೈ 28. ಅಂದಿನಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು, ಅಲ್ಲೊಂದು ಇಲ್ಲೊಂದು ಸಣ್ಣ-ಪುಟ್ಟ ದಾಳಿ ನಡೆಸಿದ್ದನ್ನು ಬಿಟ್ಟರೆ ಯಾವುದೇ ಮಹತ್ವದ ಬೆಳವಣಿಗೆ ಇಲ್ಲ. ಇನ್ನು ಲೋಕಾಯುಕ್ತ ಅಥವಾ ಉಪಲೋಕಾಯುಕ್ತರು ಸ್ಥಳಕ್ಕೆ ಹೋಗಿ ದಾಳಿ ಮಾಡಿದ ಉದಾಹರಣೆಗಳೂ
ಇಲ್ಲ. ನಿವೃತ್ತ ಲೋಕಾಯುಕ್ತರಾದ ವೆಂಕಟಾಚಲ, ಸಂತೋಷ್ ಹೆಗ್ಡೆ ಹಾಗೂ ಶಿವರಾಜ್ ಪಾಟೀಲ್ ಕಾಲದಲ್ಲಿ ಬರುತ್ತಿದ್ದ ದೂರುಗಳ ಸಂಖ್ಯೆಗೂ ಇಂದು ಬರುತ್ತಿರುವ ದೂರುಗಳ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗಷ್ಟನಿಂದ ಇದುವರೆಗೆ ಕಚೇರಿಗೆ ಬಂದಿರುವ ದೂರುಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿ.ಆಗಸ್ಟ್ ನಿಂದ ಇದುವರೆಗೆ ಲೋಕಾಯುಕ್ತ ವ್ಯಾಪ್ತಿಗೆ 494 ಪ್ರಕರಣಗಳು. ಉಪಲೋಕಾಯುಕ್ತ -1 ವ್ಯಾಪ್ತಿಗೆ 462 ಪ್ರಕರಣಗಳು, ಉಪಲೋಕಾಯುಕ್ತ- 2 ವ್ಯಾಪ್ತಿಗೆ 549 ಪ್ರಕರಣಗಳು ಬಂದಿವೆ. ಆದರೆ, ಈ ಯಾವ ಪ್ರಕರಣಗಳು ಇತ್ಯರ್ಥವಾಗಿಲ್ಲ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ವ್ಯಾಪ್ತಿಯಲ್ಲಿ ಬರುವ ನೂರಾರು ಪ್ರಕರಣಗಳು ಇತ್ಯರ್ಥವೇ ಆಗಿಲ್ಲ. ಇನ್ನು 4 ತಿಂಗಳಿನಿಂದ ರಜೆಯಲ್ಲಿದ್ದ ಲೋಕಾಯುಕ್ತ ಭಾಸ್ಕರ್‍ರಾವ್ ವ್ಯಾಪ್ತಿಗೆ ಬರುವ ನೂರಾರು ದೂರುಗಳು ಇತ್ಯರ್ಥವಾಗದೆ ಕಚೇರಿಯಲ್ಲೇ ಧೂಳು ಹಿಡಿಯುತ್ತಿವೆ. ಹೀಗಾಗಿ ಭ್ರಷ್ಟ ಅಧಿಕಾರಿಗಳು ಕೂಡ ತಮ್ಮಗಿಷ್ಟ ಬಂದಂತೆ ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಲೋಕಾ ಕಚೇರಿಯಲ್ಲೇ ನಡೆದ ಲಂಚ ಪ್ರಕರಣ ಜನರನ್ನು ಕಚೇರಿ-ಯಿಂದ ದೂರ ಸರಿಯುವಂತೆ ಮಾಡಿ ದೆಯಾಅನ್ನುವ ಪ್ರಶ್ನೆ ಕೂಡ ಉದ್ಭವವಾಗಿದೆ.
ಸೈಯದ್ ರಿಯಾಜ್ ವಿರುದ್ಧ ದೂರು
ಬೆಂಗಳೂರು: ಲೋಕಾಯುಕ್ತ ಜಂಟಿ ಆಯುಕ್ತ ಸೈಯದ್ ರಿಯಾಜ್ ವಿರುದ್ಧ ಟಾಟಾ ಐರನ್ ಸ್ಟೀಲ್ ಕಂಪನಿ ಲಿಮಿಟೆಡ್ ನ ಇಂಜಿನಿಯರ್ ಎ.ಕೆ.ಎ.ಮಜೀದ್ ಎಂಬುವರು ಲೋಕಾಯುಕ್ತ ಎಸ್ಪಿಗೆ ದೂರು ನೀಡಿದ್ದಾರೆ. ಮನೆ ಮಾರಾಟ- ಖರೀದಿ ವಿಚಾರದಲ್ಲಿ ರಿಯಾಜ್ ಅವರು ಕಚೇರಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಸೈಯದ್ ರಿಯಾಜ್ ಅವರ ಸೋದರ ಸೈಯದ್ ಇಲಿಯಾಜ್, ಎಮ್ಮಾರ್ ಚಾರಿಟಬಲ್ ಟ್ರಸ್ಟ್‍ನ ಛೇರ್ಮನ್ ಮೊಹ್ಮದ್ ರಿಯಾನ್ ನವಾಬ್ ರಾಧಾ ನಾಗರಾಜ್, ನಾಗರಾಜ್ ವಿರುದ್ಧವೂ ಭ್ರಷ್ಟಾಚಾರ ತಡೆ ಕಾಯ್ದೆ 1988 ಮತ್ತು ಕ್ರಿಮಿನಲ್ ಅಪರಾಧ ಸಂಬಂಧ ದೂರು ಸಲ್ಲಿಸಿದ್ದಾರೆ.
ಡಿ.ವಿ.ಸದಾನಂದಗೌಡ, ವಿಶ್ವನಾಥ್ ವಿರುದ್ಧ ದೂರು
ಬೆಂಗಳೂರು: ಗೋಮಾಳ ಜಾಗವನ್ನು ಮಿಥಿಕ್ ಸೊಸೈಟಿಗೆ ಮಂಜೂರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಬೆಂಗಳೂರು ನಗರದ ಅಂದಿನ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ, ಯಲಹಂಕ ತಹಶೀಲ್ದಾರ್ ಆಗಿದ್ದ ವೆಂಕಟೇಶ್ ಮತ್ತು ಮಿಥಿಕ್ ಸೊಸೈಟಿ ಪದಾಧಿಕಾರಿಗಳ ವಿರುದ್ಧ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಮತ್ತು ಹನುಮೇಗೌಡ ಎಂಬುವರು ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. ಯಲಹಂಕ ಹೋಬಳಿಯ ಆವಲಹಳ್ಳಿ ಗ್ರಾಮದದಲ್ಲಿದ್ದ ಗೋಮಾಳಕ್ಕೆ ಸೇರಿದ 10 ಎಕರೆ ಜಾಗವನ್ನು 2011ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಅವರು ಮಿಥಿಕ್ ಸೊಸೈಟಿಗೆ ಕಾನೂನುಬಾಹಿರವಾಗಿ ಮಂಜೂರು ಮಾಡಿದ್ದರು. ಯಲಹಂಕ ಶಾಸಕ ವಿಶ್ವನಾಥ್, ಅಂದಿನ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ, ಯಲಹಂಕ ತಹಶೀಲ್ದಾರ್ ಆಗಿದ್ದ ವೆಂಕಟೇಶ್ ಎಂಬುವರು ಇದಕ್ಕೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.