ಬಳ್ಳಾರಿ: ಮಹಾರಾಜ ಕೆಂಪೇಗೌಡ ಮಾಲ್ ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ವಿರುದ್ಧ ಮಾನನಷ್ಟ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ತಿಳಿಸಿದ್ದಾರೆ.
ಜೋಶಿ ಅವರು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ನನ್ನ ಹೆಸರಿಗೆ ಮಸಿ ಬಳೆಯುವ ಪ್ರಯತ್ನ ಮಾಡಿದ್ದಾರೆ. ಈ ಸಂಬಂಧ ಜೋಶಿ ಇನ್ನೆರಡು ದಿನದೊಳಗೆ ಮಾಧ್ಯಮದ ಮೂಲಕ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಳ್ಳುತ್ತೇನೆ ಎಂದು ಜೋಶಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಎಚ್ಚರಿಸಿದ್ದಾರೆ.
`ಮಹಾರಾಜ ಬಿಲ್ಡ್‍ಟೆಕ್ ಕಂಪನಿಯಲ್ಲಿ ನಿರ್ದೇಶಕನಾಗಿದ್ದೇನೆ. ರು. 350 ಕೋಟಿ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದೇನೆ. ನನ್ನ ವಿರುದ್ಧ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ' ಎಂದು ಜೋಶಿ ಮಾಧ್ಯಮದ ಮುಂದೆ ಹೇಳಿದ್ದಾರೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಮಾತನಾಡಿರುವುದು ಸರಿಯಲ್ಲ. ಜೋಶಿಯವರು ಪ್ರಸ್ತಾಪಿಸಿರುವ ಕೆಂಪೇಗೌಡ ಮಹಾರಾಜ ಮಾಲ್ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ, ಗಾಂಧಿನಗರ ಕ್ಷೇತ್ರ ವ್ಯಾಪ್ತಿಯ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿದೆ. ಸದರಿ ನೋಂದಾಯಿತ ಕರಾರುಪತ್ರಕ್ಕೆ ಪಾಲಿಕೆ ಪರವಾಗಿ ಅಂದಿನ ಬಿಬಿಎಂಪಿ ಆಯುಕ್ತರಾಗಿದ್ದ ಅಶೋಕ ದಳವಾಯಿ ಹಾಗೂ ಭವರ್‍ಲಾಲ್ ಖಿವರ್ಸಿ ಸಹಿ ಮಾಡಿದ್ದಾರೆ ಎಂದರು.