ಬೆಂಗಳೂರು: ಜೆಡಿಎಸ್ ಒಳಗಿನ ಗೊಂದಲ ಭಾನುವಾರ ನಡೆದ ಪರಿಷತ್ ಮತದಾನ ವೇಳೆಯಲ್ಲೂ ಬಹಿರಂಗಗೊಂಡಿದೆ. ಸೂಕ್ತ ಸಮನ್ವಯವಿಲ್ಲದ ಕಾರಣ ಪಕ್ಷದ ಮತದಾರರು ಅನೇಕ ಕಡೆ ಕಾಂಗ್ರೆಸ್‍ಗೆ, ಬಹುತೇಕ ಕಡೆ ಬಿಜೆಪಿಗೆ ಮತ ಚಲಾಯಿಸಿದರು. ಉಳಿದ ಕಡೆ ಜೆಡಿಎಸ್ ಸದಸ್ಯರು ತಮಗಿಚ್ಚಿಸಿದವರಿಗೆ ಮತ ಚಲಾಯಿಸಿದರು. ಇಂಥವರ ಮಧ್ಯೆ ಪರಿಷತ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮತದಾನ ಮಾಡದೆ ದೂರ ಉಳಿದರು.
ಸಾಮಾನ್ಯವಾಗಿ ಇಂಥ ಚುನಾವಣೆಗಳಲ್ಲಿ ಪಕ್ಷದ ನಾಯಕರು ನೀಡುವಸೂಚನೆಯಂತೆ ಸದಸ್ಯರು ತಮ್ಮ ಪಕ್ಷದಅಭ್ಯರ್ಥಿಗಳಿಗೆ ಮತದಾನ ಮಾಡುತ್ತಾರೆ. ಆದರೆ ಅದನ್ನು ಅಧಿಕೃತವಾಗಿ ಘೋಷಿಸುವುದಿಲ್ಲ. ಆದರೆ ಭಾನುವಾರ ಜೆಡಿಎಸ್‍ನಲ್ಲಿ ಎಲ್ಲಾ ತಲೆಕೆಳಗಾಗಿತ್ತು. ಬೆಂಗಳೂರು ನಗರ ಜಿಲ್ಲಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿರಲಿಲ್ಲ. ಆದ್ದ ರಿಂದ ಪಕ್ಷದ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಬಿಜೆಪಿಯ ದೊಡ್ಡಬಸವರಾಜು ಅವರನ್ನು ಬೆಂಬಲಿಸುವಂತೆ ಮತದಾದರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಆದರೆ ಈ ಆದೇಶ ಎಲ್ಲಿಯೂ ಸರಿಯಾಗಿ ಪಾಲನೆಯಾಗಿಲ್ಲ. ಮತ ದಾನಕ್ಕೆ ಶಾಸಕ ಜಮೀರ್ ಅಹಮ್ಮದ್ ಖಾನ್ ಜತೆ ಬಂದವರು ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿಗೆ ಮತದಾನ ಮಾಡಿದರು. ಅದೇ ರೀತಿ ಪರಿಷತ್ ಸದಸ್ಯ ಶರವಣ ಜತೆ ಮತದಾನಕ್ಕೆ ಹೋದವರು ಬಿಜೆಪಿ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ. ಅದೇ ರೀತಿ ಶಾಸಕರಾದ ಗೋಪಾಲಯ್ಯ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ತಮಗಿಚ್ಚಿಸಿದಂತೆ ಮತದಾನ ಮಾಡಿದ್ದಾರೆ. ಅಂದರೆ ಇಲ್ಲಿ ಪಕ್ಷದಲ್ಲಿ ಏಕ ರೀತಿಯ ನಿರ್ಧಾರವಾಗಿಲ್ಲ ಎನ್ನುವುದು ಸ್ಪಷ್ಟವಾಯಿತು.
ಅಷ್ಟಕ್ಕೂ ಈ ವಿಚಾರವನ್ನು ಮತದಾನ ಮಾಡಿ ಹೊರ ಬಂದ ಶಾಸಕರೇ ಬಹಿರಂಗ ಪಡಿಸಿದರು. ಪಕ್ಷದ ನಾಯಕರು ನಮಗೆ ಯಾವುದೇ ಸೂಚನೆ ನೀಡಿಲ್ಲ. ಆದ್ದರಿಂದ ನಾವು ಕಾಂಗ್ರೆಸ್‍ಗೆ ಮತ ಚಲಾಯಿಸಿದ್ದೇವೆ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದರು. ಇದಕ್ಕೆ ವಿರುದಟಛಿವಾಗಿ ಹೇಳಿದ ಶಾಸಕ ಗೋಪಾಲಯ್ಯ, ಪಕ್ಷದ ನಾಯಕರು ನಮಗೆ ಸೂಚನೆ ನೀಡಿದ್ದರು. ಅದರಂತೆ ಮತ ಹಾಕಿದ್ದೇವೆ. ಆದರೆ ಅದನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು. ಇದರ ಮಧ್ಯೆ ಬಸವರಾಜ ಹೊರಟ್ಟಿ ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಧಾರವಾಡದಲ್ಲಿ ಮತದಾನವನ್ನೇ ಬಹಿಷ್ಕರಿಸಿದರು. ಸಂಜೆಯಾದರೂ ಹೊರಟ್ಟಿ ಮತ ಗಟ್ಟೆಗೆ ಬರಲಿಲ್ಲ. ಮತ ಹಾಕಲಿಲ್ಲ.