ವಿಧಾನಸಭೆ: ಅರ್ಕಾವತಿ ಯೋಜನೆಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಸರ್ಕಾರ ತಿದ್ದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಬಗ್ಗೆ ಆಡಳಿತ ಪಕ್ಷದ ಪರವಾಗಿ ಭಾಷಣ ಆರಂಭಿಸಿದ ಬಸವರಾಜ ರಾಯರೆಡ್ಡಿ ಪ್ರಾಸಂಗಿಕವಾಗಿ ಅರ್ಕಾವತಿ ವಿಚಾರವನ್ನು ಪ್ರಸ್ತಾಪಿಸಿದರು.
ನಮ್ಮ ಸರ್ಕಾರ ಅಕ್ರಮವಾಗಿ ಡಿನೋಟಿಫಿಕೇಷನ್ ನಡೆಸಿಲ್ಲ ಎಂದು ಪ್ರತಿಪಾದಿಸಿದ್ದು ಮಾತ್ರವಲ್ಲ, ಬಿಜೆಪಿಯವರತ್ತ ಆರೋಪವನ್ನು ತಿರುಗಿಸುವ ಯತ್ನ ನಡೆಸಿದರು. ಇದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಆಕ್ರೋಶಕ್ಕೆ ಕಾರಣವಾಯಿತು.
ಅರ್ಕಾವತಿಯಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿರುವುದು ಮಾತ್ರವಲ್ಲ, ಸರ್ಕಾರ ಬಿಡಿಎ ಅಧಿಕಾರಿಗಳ ಮೂಲಕ ಕಡತಗಳನ್ನು ತಿದ್ದುತ್ತಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುವುದಕ್ಕೆ ನ್ಯಾ.ಮೂ ಕೆಂಪಣ್ಣ ನೇತೃತ್ವದಲ್ಲಿ ಆಯೋಗ ರಚಿಸಿದ್ದರೂ, ಅದಕ್ಕೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸರ್ಕಾರ ಈ ವಿಚಾರದಲ್ಲಿ ಪಾರದರ್ಶಕವಾಗಿ ವ್ಯವಹರಿಸುತ್ತಿದೆ.
ಯಾವುದೇ ಸಂಗತಿಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಯೋಜನೆಗೆ ಸಂಬಂಧಿಸಿದ ಕಡತಗಳನ್ನ ತಿದ್ದುಪಡಿ ಮಾಡುವುದಂತೂ ಆಗದ ಮಾತು. ಶೆಟ್ಟರ್ ಅವರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದದ್ದು ಎಂದು ತಿರುಗೇಟು ನೀಡಿದರು.
ಕೆಂಪಣ್ಣ ಆಯೋಗಕ್ಕೆ ಸರ್ಕಾರ ಸೂಕ್ತ ಕಾಲದಲ್ಲಿ ದಾಖಲೆಗಳನ್ನು ನೀಡುತ್ತದೆ. ಫಾಮೇರ್ಟ್ ಮಾಡಿ ದಾಖಲೆ ನೀಡುವಂತೆ ಆಯೋಗ ಕೋರಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವನ್ನಾಗಿ ಮಾಡುತ್ತಾರೆ ಎಂದು ಆಪಾದಿಸಿದರು.