ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಟರಿ ಹಾವಳಿ ನುಸುಳುವುದಕ್ಕೆ ಅವಕಾಶವಾಗುವಂಥ ಪ್ರಸ್ತಾಪವನ್ನು ರಾಜ್ಯ ಯೋಜನಾ ಮಂಡಳಿಯೇ ಸರ್ಕಾರದ ಮುಂದೆ ಇಟ್ಟಿದೆ. ಕೇರಳ ರಾಜ್ಯದಲ್ಲಿ ಜಾರಿಯಲ್ಲಿರುವ ಕಾರುಣ್ಯ ಬೆನೋವಲೆಂಟ್ ಅಂಡ್ ಮಾದರಿಯಲ್ಲಿ ರಾಜ್ಯದಲ್ಲಿ `ಅಣ್ಣಾ ಕಾರುಣ್ಯ ಆರೋಗ್ಯಯೋಜನೆ ' ಎಂಬಹೊಸ ಲಾಟರಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂಬ ಮಹಾನ್ `ಕಲ್ಯಾಣ' ಸಲಹೆಯನ್ನು ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸರ್ಕಾರದ ಮುಂದೆ ಇಟ್ಟಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ವಿಷಯ ತಿಳಿಸಿರುವ ಅವರು, ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ತರಬೇಕು. ಇದಕ್ಕೆ ಸುಮಾರು ರು. 500-ರಿಂದ ರು. 600 ಕೋಟಿ ವಾರ್ಷಿಕ ಖರ್ಚು ಬೇಕಾಗುವುದರಿಂದ ಯೋಜನೆಗೆ ಅಗತ್ಯವಾದ ಹಣವನ್ನು ಲಾಟರಿ ಮೂಲಕ ಎತ್ತಬೇಕೆಂಬ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ರಾಜ್ಯದಲ್ಲಿ ಲಾಟರಿ ನಿಷೇಧ ಜಾರಿಯಲ್ಲಿದೆ. ಈ ಯೋಜನೆಗೆ ಒಪ್ಪಿಗೆ ನೀಡುವ ಮೂಲಕ ಲಾಟರಿ ಪ್ರವೇಶಕ್ಕೆ ಸರ್ಕಾರ ಮತ್ತೆ ಅವಕಾಶ ನೀಡಬೇಕೆಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ಇದು ಕೇವಲ ಸಲಹೆ. ಒಪ್ಪುವುದು ಬಿಡುವುದು ಸರ್ಕಾರಕ್ಕೆ ಬಿಡುವುದು ಸರ್ಕಾರದ ವಿವೇಚನೆಗೆ ಸೇರಿದ್ದು. ಲಾಟರಿ ನಿಷೇಧವಿದ್ದರೂ ಮಟ್ಕಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆಯ ? ಎಂದು ಪ್ರಶ್ನಿಸಿದ ಇಬ್ರಾಹಿಂ, ರು. 10ಕ್ಕೆ ಲಾಟರಿ ಖರೀದಿಸುವುದಕ್ಕೆ ಸಾಧ್ಯವಿಲ್ಲವೇ? ಎಂದರು.
ಸ್ವರೂಪ ಹೇಗಿರುತ್ತದೆ?
ಈ ಲಾಟರಿ ಸ್ವರೂಪ ಹೇಗಿರಬೇಕೆಂಬ ಬಗ್ಗೆ ನೀಲನಕ್ಷೆ ತಯಾರಿಸಲು ಎಂಎಸ್‍ಐಎಲ್‍ಗೆ ಸೂಚನೆ ನೀಡಲಾಗಿದೆ. ಆರೋಗ್ಯ ಲಾಟರಿ ಡ್ರಾ ತಿಂಗಳಿಗೊಮ್ಮೆ ನಡೆಸಬೇಕೋ, ವಾರಕ್ಕೊಮ್ಮೆ ನಡೆಸಬೇಕೋ ಎಂಬ ಬಗ್ಗೆ ಅವರು ನಿರ್ಧಾರ ಮಾಡುತ್ತಾರೆ. ಈ ಮೂಲಕ ರಾಜ್ಯ ಸರ್ಕಾರ ಲಾಟರಿ ಆರಂಭಕ್ಕೆ ಚಾಲನೆ ನೀಡಲು ಮುಂದಾ ಗಿದೆಯೇ ? ಲಾಟರಿ ನಿಷೇಧ ಕಾಯ್ದೆ ಜಾರಿಯಲ್ಲಿ ಇರುವಾಗ ಹೇಗೆ ಈ ಯೋಜನೆ ಜನೆ ಜಾರಿ ಸಾಧ್ಯ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಗ ಸರ್ಕಾರಕ್ಕೆ ತನ್ನ ಶಿಫಾರಸು ಸಲ್ಲಿಸಿದೆ. ಮುಂದಿನ ತೀರ್ಮಾ ನ ಸರ್ಕಾರಕ್ಕೆ ಬಿಟ್ಟಿದ್ದು ಎಂದರು.
ಅಣ್ಣಾ ಇಡ್ಲಿ ಯೋಜನೆ
ಅಣ್ಣಾ ಇಡ್ಲಿ ಯೋಜನೆ ಜಾರಿಗೊಳಿಸುವಂತೆ ಯೂ ಸರ್ಕಾರಕ್ಕೆ ಶಿಫಾರಸು ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಸರ್ಕಾರ ನಿರ್ವಹಿಸುವ ಕ್ಯಾಂಟೀನ್‍ಗಳಲ್ಲಿ ರು. 5ಕ್ಕೆ 5 ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ, ಪುಲಿಯೋಗರೆ, ಮೊಸರನ್ನ ನೀಡಬೇಕು. ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ,ಗುಲ್ಬರ್ಗ ಹಾಗೂ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೆ ಬರಬೇಕು. ಒಂದು ನಗರ ಪ್ರದೇಶ ವ್ಯಾಪ್ತಿಯಲ್ಲಿ ಯೋಜನೆ ಆರಂಭಿಸುವುದಕ್ಕೆ ವಾರ್ಷಿಕ ರು. 60 ಕೋಟಿ ವೆಚ್ಚವಾಗುತ್ತದೆ ಎಂದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇಂಥ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಈಗಷ್ಟೇ ಪ್ರಸ್ತಾಪ ಸಲ್ಲಿಸು ತ್ತಿದ್ದೇವೆ. ಮುಂದೆ ಸರ್ಕಾರ ನಿರ್ಧಾರ ಮಾಡುತ್ತದೆ. ಇಂಥ ಜನಪರ ಯೋಜನೆಗಳಿಗೆ ಹಣ ಖರ್ಚು ಮಾಡುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇದೆ ಎಂದರು.
ಅದೇ ರೀತಿ ಅನ್ನಭಾಗ್ಯ ಯೋಜನೆ ಲಾಭ ಮಧ್ಯಮ ವರ್ಗದವರಿಗೂ ಲಭ್ಯವಾಗಬೇಕು. ಹೀಗಾಗಿ ಕೆಜಿಗೆ ರು. 10 ದರದಲ್ಲಿ 15 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡ್ದಾರರಿಗೂ ನೀಡಬೇಕು ಎಂದರು.
ಅಣ್ಣಾ ಕರ್ನಾಟಕದ ಸಂಸ್ಕೃತಿ
ನಿಮ್ಮ ಯೋಜನೆಯಲ್ಲಿ ಪ್ರಸ್ತಾಪಿಸಿರುವ ಅಣ್ಣಾ ಯಾರ ಸಂಕೇತ? ಎಂಬ ಪ್ರಶ್ನೆಗೆ ಸಿ.ಎಂ.ಇಬ್ರಾಹಿಂ ನೀಡಿರುವ ಉತ್ತರ ಇದು. ಅಣ್ಣಾ ಎಂದರೆ ಬಸವಣ್ಣ. ಬೇಕಿದ್ದರೆ
ಸಿದ್ರಾಮಣ್ಣ, ರೇವಣ್ಣ, ಕುಮಾರಣ್ಣ ಎಂದು ಬೇಕಾದರೂ ಕರೆದುಕೊಳ್ಳಿ ಎಂದು ಹೇಳಿದರು.