ಧರಣಿ ನಿರತ ಬಿಜೆಪಿ ಸದಸ್ಯರು (ಸಂಗ್ರಹ ಚಿತ್ರ) 
ರಾಜಕೀಯ

ಕಲಾಪ ನುಂಗಿದ ನಿರ್ಬಂಧ

ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ವಿಚಾರವು ಅರ್ಧ ದಿನದ ಕಲಾಪವನ್ನು ನುಂಗಿ ಹಾಕಿತು.

ವಿಧಾನಪರಿಷತ್: ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ವಿಚಾರವು ಅರ್ಧ ದಿನದ ಕಲಾಪವನ್ನು ನುಂಗಿ ಹಾಕಿತು.

ತೊಗಾಡಿಯಾ ಅವರು ಬೆಂಗಳೂರಿಗೆ ಆಗಮಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ನಿರ್ಣಯ ವಿರೋಧಿಸಿ ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮುಂದಾದಾಗ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಸಮರ ತಾರಕಕ್ಕೇರಿತು. ಭೋಜನಕ್ಕೂ ಮುಂಚೆ ಸದನವನ್ನು ಒಮ್ಮೆ ಮುಂದೂಡಿದರೂ ಪ್ರಯೋಜನವಾಗಲಿಲ್ಲ.

ಸಂಜೆ 4.30ಕ್ಕೆ ಮತ್ತೆ ಸದನ ಆರಂಭವಾದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ವೈಯಕ್ತಿಕ ನಿಂದನೆಗೆ ಮುಂದಾದರು. ಒಂದು ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು `ಸರ್ವಾಧಿಕಾರಿ' ಎಂದು ತೆಗಳಿದಾಗ ಅನಿವಾರ್ಯವಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡ ಬೇಕಾಯಿತು. ಈ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್ ಅವರು ಏಕವಚನದಲ್ಲಿ ಪ್ರತಿಪಕ್ಷ ಸದಸ್ಯರ ವಿರುದ್ಧ ಹರಿಹಾಯ್ದರಲ್ಲದೇ ಹದ್ದು ಮೀರಿ ವರ್ತಿಸಿದರು. ಸಚಿವರ ವರ್ತನೆಗೆ ಉಪಸಭಾಪತಿ ಪುಟ್ಟಣ್ಣ ಕೂಡ ಆಕ್ಷೇಪ ವ್ಯಕ್ತಪಡಿಸಿದರು.

ಬೆಂಗಳೂರು ನಗರಕ್ಕೆ ಆಗಮಿಸದಂತೆ ಪ್ರವೀಣ್ ತೊಗಾಡಿಯಾ ಅವರಿಗೆ ಪೊಲೀಸರು ನಿರ್ಬಂಧ ಹೇರಿರುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ನಿಲುವಳಿ ಸೂಚನೆ ಮಂಡನೆಗೆ ಸಭೆ ಆರಂಭವಾಗುತ್ತಿದ್ದಂತೆ ಅವಕಾಶ ಕೇಳಿದರು. ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವಕಾಶ ನೀಡಲಿಲ್ಲ. ಪ್ರಶ್ನೋತ್ತರದ ಬಳಿಕ ವಿಷಯ ಮಂಡನೆಗೆ ಅವಕಾಶ ಕೊಡುವುದಾಗಿ ಹೇಳಿದ ರೂ ಲೆಕ್ಕಿಸದೇ ಬಿಜೆಪಿ ಸದಸ್ಯರು ಧರಣಿಗೆ ಮುಂದಾದರು. ಈ ಹಿನ್ನೆಲೆಯಲ್ಲಿ ಸದನವನ್ನು 10 ನಿಮಿಷ ಮುಂದೂಡಿ ಪ್ರತಿಪಕ್ಷ ಸದಸ್ಯರ ಜತೆ ಸಂಧಾನ ನಡೆಸಿ ಪ್ರಶ್ನೋತ್ತರದ ಬಳಿಕ ಅವಕಾಶ ಕೊಡಲು ಒಪ್ಪಿಗೆ ಪಡೆಯಲಾಯಿತು.

ಆದರೆ ಭೋಜನದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಈಶ್ವರಪ್ಪ ವಿಷಯ ಪ್ರಸ್ತಾಪಕ್ಕೆ ಮುಂದಾದರು. ಆರಂಭದ 10 ನಿಮಿಷಗಳ ಕಾಲ ಸದನ ಸುಲಲಿತವಾಗಿಯೇ ನಡೆಯುತ್ತಿತ್ತು. ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಕ್ರಿಯಾ ಲೋಪ ಎತ್ತುತ್ತಿದ್ದಂತೆ ಮತ್ತೆ ಸದನದಲ್ಲಿ ಗಲಾಟೆ ಆರಂಭವಾಯಿತು. ಸಭಾಪತಿಯವರು ವಿಷಯ ಪ್ರಸ್ತಾವನೆಗೆ ಅವಕಾಶ ನೀಡಿದ ಮೇಲೆ ಕ್ರಿಯಾಲೋಪ ಎತ್ತುವುದು ಸಭಾಪತಿಗೆ ಮಾಡುವ ಅವಮಾನ ಎಂದು ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು. ಉಗ್ರಪ್ಪ ಅವರ ಕ್ರಿಯಾಲೋಪವನ್ನು ಹಾಗೆಯೇ ಇರಿಸಿಕೊಂಡು ಈಶ್ವರಪ್ಪ ಅವರಿಗೆ ಮಾತನಾಡಲು ಅವಕಾಶ ಕೊಟ್ಟರು.

ಸೋನಿಯಾ ಸೂಚನೆಯಂತೆ ಕೆಲಸ
ಆ ಸಂದರ್ಭದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಮೇಲೆ ಆರೋಪ ಹೊರಿಸಿದ ಈಶ್ವರಪ್ಪ ಸದನದಲ್ಲಿ ಮತ್ತೆ ಮಾತಿನ ಚಕಮಕಿಗೆ ಕಾರಣವಾದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸೂಚನೆಯಂತೆ ಹಾಗೂ ಅವರನ್ನು ಮೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಈಗಾಗಲೇ 8 ಸಾರ್ವಜನಿಕ ಸಭೆಗಳನ್ನು ತೊಗಾಡಿಯಾ ನಡೆಸಿದ್ದಾರೆ, ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಆದರೆ ಮತಬ್ಯಾಂಕ್ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಇಂತಹ ನಿರ್ಧಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ರಾಷ್ಟ್ರದ್ರೋಹಿ ಮದನಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಭಯೋತ್ಪಾದಕರಿಗೆ ರಾಜ್ಯದಲ್ಲಿ ರಕ್ಷಣೆ ಸಿಗುತ್ತದೆ. ಆದರೆ ದೇಶದ್ರೋಹಿಗಳಿಗೆ ಸಿಂಹಸ್ವಪ್ನರಾಗಿರುವ ತೊಗಾಡಿಯಾ ಅವರಿಗೆ ನಿಷೇಧ ಹೇರಲಾಗುತ್ತಿದೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸೋನಿಯಾ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಕಾಂಗ್ರೆಸ್‍ನ ಎಲ್ಲ ಸಚಿವರು ಹಾಗೂ ಸದಸ್ಯರು ಕೂಗಾಟ ಆರಂಭಿಸಿದರು. ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದರು.

ಸಚಿವ ಅಭಯ ಚಂದ್ರ ಜೈನ್ ಅವರು ಈಶ್ವರಪ್ಪ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಆವೇಶಭರಿತರಾಗಿ ಮಾತನಾಡಿದರು. ಸಚಿವರ ಈ ನಡತೆಗೆ ಸಭಾಪತಿ ಕೂಡ ಅಸಮಾಧಾನವ್ಯಕ್ತಪಡಿಸಿದರು. ಆಗ ಎಲ್ಲ ಸದಸ್ಯರನ್ನು ಸಭಾಪತಿ ಸಂಬಾಳಿಸುತ್ತಿದ್ದಂತೆ ಕಾಂಗ್ರೆಸ್‍ನ ಉಗ್ರಪ್ಪ ಎದ್ದುನಿಂತು `ಈ ದೇಶ ಕಂಡ ಅತಿ ದೊಡ್ಡ ಸರ್ವಾಧಿಕಾರಿ ಮೋದಿ' ಎಂದು ಕಿಡಿಹೊತ್ತಿಸಿದರು. ಆಗ ಕೂಗಾಟದ ಸರದಿ ಬಿಜೆಪಿ ಸದಸ್ಯರದ್ದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT