ವಿಧಾನಪರಿಷತ್ತು: ಬೆಂಗಳೂರು ಅರಮನೆ ಮೈದಾನದಲ್ಲಿರುವ 80 ತಾತ್ಕಾಲಿಕ ಕಟ್ಟಡಗಳು ಅನಧಿಕೃತವಾಗಿದ್ದು, ಅವುಗಳಿಂದ ಸಿಗುತ್ತಿರುವ ಕೋಟ್ಯಂತರ ರುಪಾಯಿ ಬಾಡಿಗೆಯಲ್ಲಿ ಸರ್ಕಾರಕ್ಕೆ ಬಿಡಿಗಾಸೂ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, ಅರಮನೆ ಮೈದಾನದಲ್ಲಿರುವ ತಾತ್ಕಾಲಿಕ ಕಟ್ಟಡಗಳಿಂದ ಸಿಗುವ ಬಾಡಿಗೆ ಸರ್ಕಾರಕ್ಕೆ ಸಿಗುವಂತಾಗಲು ಕಾನೂನು ಚೌಕಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಆಗ ಮತ್ತೆ ಮರು ಪ್ರಶ್ನೆ ಹಾಕಿದ ಉಗ್ರಪ್ಪ, ಮೈದಾನದಲ್ಲಿರುವ 80 ಕಟ್ಟಡಗಳು ಪರಿವರ್ತನೆ ಯುಗದ ಭೂಮಿಯಲ್ಲಿ ನಿರ್ಮಾಣಗೊಂಡಿವೆ. ಆ ಕಟ್ಟಡಗಳಿಂದ ದಿನಕ್ಕೆ ರು.10 ಲಕ್ಷದವರೆಗೂ ಬಾಡಿಗೆ ವಸೂಲಿಯಾಗುತ್ತಿದ್ದು, ವರ್ಷಕ್ಕೆ ರು.5000 ಕೋಟಿವರೆಗೂ ಸಂಗ್ರಹ ವಾಗುತ್ತಿದೆ. ಆದರೆ ಇದರಲ್ಲಿ ಸರ್ಕಾರಕ್ಕೆ ಕಿಂಚಿತ್ತೂ ಸಿಗುತ್ತಿಲ್ಲ ಎಂದರೆ ಇದಕ್ಕೆ ಹೇಗೆ? ಹಾಗಿದ್ದರೆ ಅಲ್ಲಿನ ಬಾಡಿಗೆ ಹಣ ಯಾರಿಗೆ ಹೋಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಆಗ ಮತ್ತೆ ಉತ್ತರಿಸಲು ಮುಂದಾದ ಸಿದ್ದರಾಮಯ್ಯ, 1998ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಅರಮನೆ ಸ್ವಾಧೀನಕ್ಕಾಗಿ ತೀರ್ಮಾನಿಸಲಾಗಿತ್ತು. ಇದರ ವಿರುದ್ಧ ರಾಜರ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದರು. ಅಲ್ಲಿ ತೀರ್ಪು ಸರ್ಕಾರದ ಪರ ಬಂದಿತ್ತು. ನಂತರ ಅವರು ಸುಪ್ರೀಂ ಕೋರ್ಟ್‍ನಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ 1998 ಮತ್ತು 2010ರಲ್ಲಿ ನೀಡಿದ ಮಧ್ಯಂತರ ಆದೇಶದಲ್ಲಿ ರಾಜ ಮನೆತನಕ್ಕೆ ಅರಮನೆಯಲ್ಲಿ ತಾತ್ಕಾಲಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಸಿಕ್ಕಿದೆ ಎಂದರು. ಈಗ ಅಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಿದ್ದು, ಅದರಿಂದ ಬರುವ ಬಾಡಿಗೆ ಹಣವನ್ನು ರಾಜ ವಂಶಸ್ಥರೇ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಆ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಲಾಗಿದ್ದು, ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ. ಆದರೂ ಅರಮನೆ ಜಾಗ ಮತ್ತು ಕಟ್ಟಡಗಳ ನಿಯಂತ್ರಣ ಸರ್ಕಾರದ ಬಳಿ ಇದ್ದರೂ ಸ್ವಾಧೀನ ರಾಜ ಮನೆತನದವರ ಬಳಿಯೇ ಇದೆ. ಅರಮನೆ ವಿವಾದ ಕೋರ್ಟ್ ನಲ್ಲಿರುವುದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಸಿಗುತ್ತಿಲ್ಲ ಎಂದರು.