ರಾಜಕೀಯ

ತೊಗಾಡಿಯಾ ಭಾಷಣಕ್ಕೆ ಅವಕಾಶವೇ ಇಲ್ಲ: ಸಿಎಂ

Rashmi Kasaragodu

ವಿಧಾನಪರಿಷತ್: ವಿಎಚ್‍ಪಿ ನಾಯಕ ಪ್ರವೀಣ್ ತೊಗಾಡಿಯಾ  ವಿರುದ್ಧ  ರಾಜ್ಯದಲ್ಲಿ 45ಕ್ಕೂ ಹೆಚ್ಚು ಕೇಸುಗಳಿದ್ದು, ಅವರ ಭಾಷಣಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರವೀಣ್ ತೊಗಾಡಿಯ ಭಾಷಣಕ್ಕೆ ಅವಕಾಶ ನೀಡಬೇಕೆಂದು ಸದನದಲ್ಲಿ ಬಿಜೆಪಿ ಸದಸ್ಯರು ಗುರುವಾರವೂ ಪ್ರತಿಭಟಿಸುತ್ತಿದ್ದಾಗ ಅವರು ರಾಜ್ಯದಲ್ಲಿ ಯಾವುದೇ ಧರ್ಮದವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದ ಅಭ್ಯಂತರವಿಲ್ಲ. ಆದರೆ ಪ್ರಚೋದನಕಾರಿ ಭಾಷಣ ಮಾಡಿ ಸಮಾಜದ ಶಾಂತಿ ಕದಡುವ ತೊಗಾಡಿಯಾ ಅವರಿಗೆ ಅವಕಾಶ ನೀಡುವುದಿಲ್ಲ ಎಂದರು. ರಾಜ್ಯ ನೆಮ್ಮದಿಯಿಂದ ಇದೆ. ಇಲ್ಲಿ ಕೋಮು ಗಲಭೆ ಎಬ್ಬಿಸಲು ಅವಕಾಶ ನೀಡುವುದಿಲ್ಲ. ನಿಷೇಧದ ನಡುವೆಯೂ ತೊಗಾಡಿಯಾ ಪ್ರವೇಶಕ್ಕೆ ಮುಂದಾದರೆ ಅದನ್ನು ಸರ್ಕಾರ ಸಮರ್ಥವಾಗಿ ಎದುರಿಸುತ್ತದೆ ಎಂದು ಹೇಳಿದರು.
ತೊಗಾಡಿಯಾ  ಅವರಿಂದ ಕೋಮಗಲಭೆ ನಡೆಯುತ್ತದೆ ಎಂಬ ಕಾರಣಕ್ಕಾಗಿಯೇ  2003ರಲ್ಲಿ ಬೆಂಗಳೂರಿನಲ್ಲಿ, 2006ರಲ್ಲಿ ಬೆಳಗಾವಿಯಲ್ಲಿ ಭಾಷಣ ನಿಷೇ„ಸಲಾಗಿತ್ತು.
ಅಷ್ಟೇ ಏಕೆ ಈ ಹಿಂದೆ ಪುತ್ತೂರಿನಲ್ಲಿ ಭಾಷಣಕ್ಕಾಗಿ ಬಂದಾಗ ದೊಡ್ಡ ಗಲಾಟೆ ನಡೆದು ಶಾಂತಿ ನಾಶವಾಗಿತ್ತು. ಆದ್ದರಿಂದ ತೊಗಾಡಿಯಾಗೆ ಅವಕಾಶ ಇಲ್ಲವೇ ಇಲ್ಲ ಎಂದು
ಸಿದ್ದರಾಮಯ್ಯ ಹೇಳಿದರು. ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಮತ್ತೆ ಧರಣಿ ಮುಂದುವರಿಸಿದರು. ಆಗ ಧರಣಿ ಮಧ್ಯೆಯೇ  ಪ್ರತಿಪಕ್ಷ ನಾಯಕ ಈಶ್ವರಪ್ಪ ನಿಲುವಳಿ ಸೂಚನೆ ಮುಂದಾದರು. ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೊಗಾಡಿಯಾ ಭಾಷಣದಂತ ವಿಚಾರಗಳನ್ನು ನಿಲುವಳಿ ಸೂಚನೆಯಲ್ಲಿ ತರುವುದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ. ಸಾಲದಕ್ಕೆ ವಿಚಾರ ಕೋರ್ಟ್‍ನಲ್ಲಿದೆ. ಇಂಥ ಸಂದರ್ಭದಲ್ಲಿ ಏನೇ ಮಾತನಾಡಿದರೂ ನ್ಯಾಯಾಂಗ  ವಿರೋಧಿ ಕ್ರಮವಾಗುತ್ತದೆ ಎಂದು ವಾದಿಸಿದರು.
ಆಗ ಈಶ್ವರಪ್ಪ ಸಹ ಸದಸ್ಯರನ್ನು ಧರಣಿಯಲ್ಲಿ ಮುಂದುವರಿಯುವಂತೆ ಮಾಡಿ ನಿಲುವಳಿ ಸೂಚನೆಗಾಗಿ ಪೂರ್ವಭಾವಿ ಪ್ರಸ್ತಾವನೆ ಮಂಡಿಸಿದರು. ನಂತರ ಸಭಾಪತಿ ಪೀಠದಲ್ಲಿದ್ದ ಪುಟ್ಟಣ್ಣ, ನಿಲುವಳಿ ಸೂಚನೆ ಬಗ್ಗೆ ನಂತರ ತೀರ್ಮಾನಿಸಲಾಗುವುದು ಎಂದರು. ಸಭೆ ಆರಂಭದಲ್ಲಿ ತೊಗಾಡಿಯಾ  ಭಾಷಣಕ್ಕೆ ಅನುಮತಿ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ವಿಧವಿಧ ರೀತಿಯಲ್ಲಿ ವಾದಿಸಿದ್ದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ನಡುವೆ ಚರ್ಚೆ, ವಾಗ್ವಾದಗಳು ನಡೆದಿದ್ದವು.

SCROLL FOR NEXT