ವಿಧಾನಸಭೆ: ನೀವು ಅಷ್ಟೊಂದು ದುರ್ಬಲರಾ? ಇಂಥ ನಡೆ ಸರ್ಕಾರದ ಅಸಾಮರ್ಥ್ಯ ತೋರುವುದಿಲ್ಲವೇ? ಅನುಮಾನವೇ ಬೇಡ. ಈ ರೀತಿ ಸರ್ಕಾರವನ್ನು ತರಾಟೆಗೆ
ತೆಗೆದುಕೊಂಡಿದ್ದು ಸ್ಪೀಕರ್ ಕಾಗೋಡು ತಿಮ್ಮಪ್ಪನವರು. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನೇ ಉದ್ದೇಶಿಸಿ ನೇರವಾಗಿ ಈ ರೀತಿ ಪ್ರಶ್ನೆ ಮಾಡಿದ್ದಾರೆ. ನಿಯಮ 69ರ ಅನ್ವಯ ಅರಣ್ಯ ಒತ್ತುವರಿ ಸಮಸ್ಯೆ ಬಗ್ಗೆ ಮುಂದುವರಿದ ಚರ್ಚೆ ಸಂದರ್ಭದಲ್ಲಿ ಮತ್ತೆ ಕೆಂಡಾಮಂಡಲರಾದ ಸ್ಪೀಕರ್, ಸಿದ್ದರಾಮಯ್ಯನವರನ್ನು ಈ ರೀತಿ ಪ್ರಶ್ನಿಸಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹೀಗೆ ಮಾಡುತ್ತಿವುದು ಸರ್ಕಾರದ ಅಸಾಮರ್ಥ್ಯವನ್ನು ತೋರುವುದಿಲ್ಲವೇ? ಸರ್ಕಾರ ಒಂದು ದಿಟ್ಟ ನಿಲುವು ತೆಗೆದುಕೊಂಡು ಈ ಸದನದ ಮೂಲಕ ಜಾರಿ ಗೊಳಿಸಿ ಎಂದು ತಾಕೀತು ಮಾಡಿದರು. ಆದರೆ ಸ್ಪೀಕರ್ ಗರಂ ಆಗಿ ಈ ರೀತಿ ಹೇಳಿ ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಒಂದಕ್ಷರವನ್ನೂ ಮಾತನಾಡಲಿಲ್ಲ. ಅಷ್ಟು ಮಾತ್ರವಲ್ಲ ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ನಾನೇ ಖುದ್ದಾಗಿ ಹುಣಸೂರಿಗೆ ತೆರಳಿ ಅಲ್ಲಿನ 300 ಕುಟುಂಬಕ್ಕೆ 1000 ಎಕರೆ ಜಮೀನು ಹಕ್ಕುಪತ್ರ ನೀಡಿ ಬಂದಿದ್ದೆ. ಆದರೆ ಈಗ ಅವರಿಗೆ ಜಮೀನು ಸಿಗುತ್ತಿದೆ. ಇದೆಲ್ಲವೂ ಆಡಳಿತ ಯಂತ್ರದ ನಿಷ್ಕ್ರಿಯತೆಯನ್ನು ತೋರುವುದಿಲ್ಲವೇ ? ಎಂದು ಪ್ರಶ್ನಿಸಿದರು. ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ಅವರತ್ತ ನಿಮಗೊಂದು ದೊಡ್ಡ ನಮಸ್ಕಾರ ಎಂಬರ್ಥ ಬರುವ ರೀತಿಯಲ್ಲಿ ಕೈಮುಗಿದರು. ಬಾಲಸುಬ್ರಹ್ಮಣ್ಯಂ ವರದಿ: ಈ ಸಂದರ್ಭದಲ್ಲಿ ಬಾಲ ಸುಬ್ರಹ್ಣಣ್ಯಂ ವರದಿಯನ್ನು ಸರ್ಕಾರ ಒಪ್ಪಿದೆಯೋ , ಇಲ್ಲವೋ? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಬಿಜೆಪಿಯ ಅಪ್ಪಚ್ಚು ರಂಜನ್, ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ.ಬೋಪಯ್ಯ ಜೆಡಿಎಸ್‍ನ ವೈ.ಎಸ್.ವಿ.ದತ್ತ, ಬಿ.ಬಿ.ನಿಂಗಯ್ಯ, ಚಿಕ್ಕಮಾದು ಮೊದಲಾದವರು ಸರ್ಕಾರದ ನಿಲುವನ್ನು ಈ ವಿಚಾರದಲ್ಲಿ ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. ಆದರೆ ಸರ್ಕಾರ ವರದಿ ವಿಚಾರದಲ್ಲಿ ಮತ್ತೆ ಮಗುಮ್ಮಾಗಿ ವರ್ತಿಸಿತು. ಇದರಿಂದ ಕೆರಳಿದ ಸ್ಪೀಕರ್ ರಮೇಶ್ ಕುಮಾರ್ ಅವರತ್ತ ತಿರುಗಿ ರೀ ಪುರೋಹಿತರೇ, ಅದೇನು ಅಂತ ಸ್ವಲ್ಪ ಕ್ಲಿಯರ್ ಮಾಡ್ರಿ ಎಂದು ಸೂಚಿಸಿದರು.
ಜಮೀನು ಸಂಬಂಧವಿಲ್ಲ: ಆಗ ಮಧ್ಯಪ್ರವೇಶ ಮಾಡಿದ ರಮೇಶ್‍ಕುಮಾರ್, ಒತ್ತುವರಿ ತೆರವಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ ಎಂದರೆ, ಪರೋಕ್ಷವಾಗಿ ವರದಿಯನ್ನು ಒಪ್ಪಿಕೊಂಡಿದ್ದಾರೆ ಎಂದೇ ಅರ್ಥಬರುತ್ತದೆ. ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದವರಿಗೆ ನೇಗಿಲು ಉತ್ತು ಅಭ್ಯಾಸವಿಲ್ಲ. ತೀರ್ಪು ಕೋಟ್ಟವರಿಗೆ ಮತ್ತು ಪ್ರಮಾಣಪತ್ರ ಸಲ್ಲಿಸಿದವರಿಗೆ ಭೂಮಿಯ ಸಮಸ್ಯೆ ಗೊತ್ತಿಲ್ಲ. ಅದು ನಮಗೆ ಸಂಬಂಧಪಟ್ಟಿದ್ದು. ಏಕೆಂದರೆ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಈ ಪ್ರಕರಣದಲ್ಲಿ ನಾವೆಲ್ಲ ಕಳ್ಳರು. ಕೋಟ್ಯಂತರ ರೂ ಮೌಲ್ಯದ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬಂತೆ ಬಿಂಬಿಸುತ್ತಿದ್ದಾರೆ. ಇವರೆಲ್ಲರಿಗೂ ಸದನದ ಸಾರ್ವಭೌಮತ್ವ ಮನವರಿಕೆ ಮಾಡಿಕೊಡಬೇಕು. ಒಂದು ಸಲ ರುಚಿ ತೋರಿಸಿದರೆ ಗೊತ್ತಾಗುತ್ತದೆ. ಶಾಸನ ಸಭೆಗಿಂತ ಯಾರೂ ಶ್ರೇಷ್ಠರಲ್ಲ. ಆದರೆ ನಮ್ಮ ವರ್ತನೆಯಿಂದ ಈ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.