ಬೆಂಗಳೂರು: `ಅರ್ಕಾವತಿ ಕರ್ಮಕಾಂಡವಂತೆ, ಅದು ಕುಮಾರಸ್ವಾಮಿ ಕಾಲದ ಕರ್ಮಕಾಂಡ. ಯಡಿಯೂರಪ್ಪ ಮತ್ತು ಬಿಜೆಪಿ ಆಡಳಿತವಿದ್ದಾಗಿನ ಕರ್ಮಕಾಂಡವಲ್ಲದೇ ಬೇರೇನೂ ಅಲ್ಲ...' ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪುಸ್ತಕದ ಹೆಸರು ಅರ್ಕಾವತಿ ಕರ್ಮಕಾಂಡ ಎಂದಿದೆ. 2013ರ
ಮೇನಲ್ಲಿ ನಾನು ಮುಖ್ಯಮಂತ್ರಿಯಾದೆ. ಅಲ್ಲಿಂದ ಇಲ್ಲಿಯವರೆಗೆ ಒಂದು ಗುಂಟೆ ಜಾಗವನ್ನೂ ಡಿ ನೋಟಿಫೈಮಾಡಿಲ್ಲ. ಡಿನೋಟಿಫೈ ಮಾಡಿಲ್ಲ ಎಂದಾದ ಮೇಲೆ ಕರ್ಮಕಾಂಡ ಹೇಗಾಗುತ್ತದೆ. ಕರ್ಮಕಾಂಡ ಆಗಿರೋದು ಎಚ್‍ಡಿಕೆ ಮತ್ತು ಬಿಜೆಪಿ ಕಾಲದಲ್ಲಿ' ಎಂದು ಹೇಳಿದರು. `ಪುಸ್ತಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಯವರು ಹೊಸದೇನು ಹೇಳಿಲ್ಲ, ಬಿಜೆಪಿಯವರು ಹೇಳಿದ್ದನ್ನೇ ಪುನರಾವರ್ತಿಸಿದ್ದಾರೆ. ಅದು ಪ್ರೊಸೀಡಿಂಗ್ಸ್ ಪುಸ್ತಕ ಅಷ್ಟೆ' ಎಂದು ಹಗುರ ದನಿಯಲ್ಲಿ ಹೇಳಿದರು.
`ಅರ್ಕಾವತಿ ಕರ್ಮಕಾಂಡ ಪುಸ್ತಕ ಬಿಡುಗಡೆಯೇ ಒಂದು ರಾಜಕೀಯ. ಅದನ್ನು ಯಾರು ಬಿಡುಗಡೆ ಮಾಡಿದರೋ ಅವರದೇ ಅವಧಿಯ ಕರ್ಮಕಾಂಡ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತು ಕುಮಾರಸ್ವಾಮಿಯವರ ಅವಧಿಯಲ್ಲಿ ಆದ ಪ್ರೊಸೀಡಿಂಗ್ಸ್‍ಗಳ (ಘಟನಾ ವಳಿ) ದಾಖಲೆಯದು. ಅದನ್ನೆಲ್ಲಾ ಸಂಗ್ರಹಿಸಿ
ಪುಸ್ತಕ ಮಾಡಿದ್ದಾರೆ' ಎಂದರು. ಹಾಗೊಂದು ವೇಳೆ ದಾಖಲೆ ಇದ್ದರೆ ಸತ್ಯಾಸತ್ಯತೆ ತಿಳಿಸುವ ಉದ್ದೇಶದಿಂದನಮ್ಮದೇ ಸರ್ಕಾರ ರಚಿಸಿರುವ ಆಯೋ ಗಕ್ಕೆ ನೀಡಲಿ, ಯಾರು ಬೇಕಾದರೂ ದಾಖಲೆ ನೀಡಬಹುದು. ಅದು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ. ಇದೊಂದು ಕುತಂತ್ರವಲ್ಲದೇ ಮತ್ತಿನ್ನೇನು ಎಂದು ಕುಮಾರಸ್ವಾಮಿಯವರನ್ನು ಟೀಕಿಸಿದರು. ನ್ಯಾ.ಕೆಂಪಣ್ಣ ಆಯೋಗಕ್ಕೆ ದಾಖಲೆ ನೀಡಲು ನಾವು ನಿಧಾನ ಮಾಡುತ್ತಿಲ್ಲ. ಒಂದು ಲೋಡ್ ದಾಖಲೆಗಳಿವೆ. ಯಾವುದೇ ದಾಖಲೆಯನ್ನು ಮುಚ್ಚಿಡುವ ಪ್ರಶ್ನೆಯೂ ಇಲ್ಲ ಎಂದು ಹೇಳಿದರು. ಸಮಾಜದ ಸಾಮರಸ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಪ್ರವೀಣ್ ತೊಗಾಡಿಯಾ ಭೇಟಿಗೆ ಅವಕಾಶ ನೀಡಿಲ್ಲ. ಆದರೆ, ವಿವಿಧ ತಂತ್ರಜ್ಞಾನ ಬಳಸಿಕೊಂಡು ಭಾಷಣ ಮಾಡಲು ಮುಂದಾದರೆ ಏನು ಮಾಡಬೇಕೆಂಬ ಬಗ್ಗೆ ಪೋಲೀಸರು ತೀರ್ಮಾನ ಮಾಡುತ್ತಾರೆ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ