ರಾಜಕೀಯ

ಸದನದಲ್ಲಿ ಪಾದಚಾರಿ ಮಾರ್ಗ

ವಿಧಾನಪರಿಷತ್ತು: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳು ವ್ಯಾಪಾರಿಗಳು, ಇತರರಿಂದ ಒತ್ತುವರಿಯಾಗಿದ್ದು, ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವಂತಹ ಪರಿಸ್ಥಿತಿ ಉದ್ಭವಿಸಿದೆ.

ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜೆಡಿಎಸ್ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವ ವ್ಯಾಪಾರಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುತ್ತಿದೆ. ವ್ಯಾಪಾರ ನಡೆಸುತ್ತಿರುವವರ ಬಗ್ಗೆ ಸಮೀಕ್ಷೆ ಕೈಗೊಂಡು ಅದು ಪೂರ್ಣಗೊಂಡ ನಂತರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪಾಲಿಕೆಯು ಯೋಜನೆ ರೂಪಿಸಲಿದೆ ಎಂದು ತಿಳಿಸಿದ್ದಾರೆ.

ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳು, ಕಿರಿದಾಗಿರುವ ರಸ್ತೆಗಳು ಮತ್ತು ವಾಹನಗಳ ದಟ್ಟಣೆಯಿಂದ ಆಗುತ್ತಿರುವ ಅಪಘಾತ, ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಒತ್ತುವರಿ ತೆರವುಗೊಳಿಸಿ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸಿದೆಯೇ, ಚಿಂತಿಸಿದ್ದಲ್ಲಿ ಈ ಕುರಿತು ಕೈಗೊಂಡ ಕ್ರಮಗಳೇನು ಎಂದು ಶ್ರೀನಿವಾಸ್ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಸಿಎಂ, ರಸ್ತೆಗಳನ್ನು ಅಗಲೀಕ ರಣಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಹೊಸದಾಗಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲೂ ಯೋಜನೆ ರೂಪಿಸಲಾಗುತ್ತಿದೆ. ಅನುದಾನ ಲಭ್ಯತೆ ಆಧಾರದ ಮೇಲೆ ಹಂತಹಂತವಾಗಿ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಯನ್ನು ಕೈಗೊಂಡ ನಂತರ ಅಪಘಾತ- ತೊಂದರೆಗಳು ಕಡಿಮಯಾಗುತ್ತದೆ ಎಂದು ವಿವರಿಸಿದ್ದಾರೆ.

SCROLL FOR NEXT