ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಲು 18 ದಲಿತ ಸಂಘಟನೆಗಳ ಮುಖಂಡರ ಸಭೆ ನಗರದಲ್ಲಿ ಮಂಗಳವಾರ ನಡೆಯಲಿದೆ. ಖಾಸಗಿ ಹೋಟೆಲ್‍ನಲ್ಲಿ ಬೆಳಗ್ಗೆ 9ರಿಂದ 11ರವರೆಗೆ ಸಭೆ ನಡೆಯಲಿದ್ದು, ಖುದ್ದು ಪರಮೇಶ್ವರ ಅವರೂ ಭಾಗವಹಿಸಲಿದ್ದಾರೆ. ಬುಧವಾರ ದೆಹಲಿಗೆ ತೆರಳುವ ಪರಮೇಶ್ವರ ಅವರು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ದಲಿತ ಮುಖ್ಯಮಂತ್ರಿ ವಾದ ತೀವ್ರ ಸ್ವರೂಪ ಪಡೆಯುತ್ತಿರುವ ಸಂದರ್ಭದಲ್ಲಿ ಈ ಹಠಾತ್ ಬೆಳವಣಿಗೆ ಕುತೂಹಲ ಮೂಡಿಸಿದೆ.
ಪಕ್ಷವನ್ನು ಅಧಿಕಾರಕ್ಕೆ ತಂದು ಅಧಿಕಾರ ವಂಚಿತರಾಗಿರುವ ಪರಮೇಶ್ವರ ಮುಂದಿನ ನಡೆ ಬಗ್ಗೆ ಚರ್ಚಿಸಲಾಗುತ್ತದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಸಿಎಂ ಸಿದ್ದರಾಮಯ್ಯ ಅವರೂ ರಾಜಕೀಯ ನಡೆ ಆರಂಭಿಸಿದ್ದಾರೆ. ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಅವರನ್ನು
ಸಚಿವ ಎಚ್.ಆಂಜನೇಯ ನಿವಾಸಕ್ಕೆ ಕರೆಸಿಕೊಂಡು ಸಭೆ ನಡೆಸಿದ್ದಾರೆ. ಈ ವೇಳೆ
ಮೀರಾಕುಮಾರ್, `ದಲಿತ ಮುಖ್ಯಮಂತ್ರಿ ಬಗ್ಗೆ ಚರ್ಚಿಸಲು ರಾಜ್ಯದಲ್ಲಿ ಸಿಎಂ
ಹುದ್ದೆ ಖಾಲಿ ಇಲ್ಲ' ಎಂದು ಹೇಳಿಕೆ ನೀಡಿರುವುದು ಗಮನಾರ್ಹ.