ಬೆಂಗಳೂರು: ತುಮಕೂರಿನ ವಸಂತ ನರಸಾಪುರದಲ್ಲಿ ರು.3500 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ವಲಯ ಸ್ಥಾಪನೆ ಮಾಡುವ ಮಹತ್ವದ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಸಿಎಂ ಸಿದ್ದರಾಮಯ್ಯಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದು
ಕೊಳ್ಳಲಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಲಿ ಇರುವ 862 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಮಹತ್ವದ ನಿರ್ಧಾರಗಳು
ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ವಲಯ
ತುಮಕೂರು ಜಿಲ್ಲೆ ವಸಂತ ನರಸಾ ಪುರದಲ್ಲಿ ರಾಷ್ಟ್ರೀಯ ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ವಲಯ ಅಭಿವೃದ್ಧಿ ಪಡಿಸಲು ರಾಜ್ಯ ಸಣ್ಣ ಕೈಗಾರಿಕೆ ಬಂಡವಾಳ ಅಭಿವೃದ್ಧಿ ನಿಗಮ ಸಿದ್ದಪಡಿಸಿದ ಪ್ರಸ್ತಾಪಕ್ಕೆ ಒಪ್ಪಿಗೆ. ರು. 3500 ಕೋಟಿ ವೆಚ್ಚದ ಈ ಯೋಜನೆಗೆ 13,327 ಎಕರೆ ಭೂಮಿ ಅಗತ್ಯವಿದೆ. 3,598 ಎಕರೆ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿ ಕೊಳ್ಳಲಾಗಿದ್ದು, 1,723 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಶಿರಾ ಸುತ್ತಮುತ್ತ 7907 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. 80,000 ಮಂದಿಗೆ ನೇರ ಮತ್ತು 1,60,000 ಮಂದಿಗೆ ಪರೋಕ್ಷ ಉದ್ಯೋಗ ನೀಡಲು ಈ ಯೋಜನೆಯಿಂದ ಸಾಧ್ಯ.
ವಾಹನ ನಿರೀಕ್ಷಕರ ನೇಮಕ
ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 150 ಮೋಟಾರು ವಾಹನ ನಿರೀಕ್ಷಕರ ನೇರ ನೇಮಕಕ್ಕೆ ವೃಂದ ಮತ್ತು ನೇಮಕ ನಿಯಮ ತಿದ್ದುಪಡಿಗೆ ಒಪ್ಪಿಗೆ. ಈ ಹಿಂದೆ ಕೆಪಿಎಸ್‍ಸಿ ಮೂಲಕ ಮಾಡಿಕೊಂಡಿದ್ದ 100 ನಿರೀಕ್ಷಕರ ನೇಮಕ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಇಲಾಖೆಯಲ್ಲಿ 233 ಹುದ್ದೆ ಖಾಲಿ ಇರುವುದ ರಿಂದ ಒಂದೇ ಬಾರಿಗೆ 150 ಜನರ ನೇಮಕಕ್ಕೆ ಒಪ್ಪಿಗೆ.
ಪ್ರವಾಸಿ ಮೂಲ ಸೌಕರ್ಯ
ಕೇಂದ್ರ ಪ್ರವಾಸೋದ್ಯಮ ಇಲಾಖೆ ನೆರವಿನೊಂದಿಗೆ ರಾಜ್ಯದ ಕರಾವಳಿ ಪ್ರದೇಶದ 24 ಕಡೆ ರು. 29.55 ಕೋಟಿ ವೆಚ್ಚದಲ್ಲಿ ಪ್ರವಾಸಿ ಮೂಲ ಸೌಕರ್ಯ ಕಲ್ಪಿಸಲು ಒಪ್ಪಿಗೆ. ಕೇಂದ್ರ ದಿಂದ ಯೋಜನೆಗೆ ಈಗಾಗಲೇ ರು. 10 ಕೋಟಿ ಬಿಡುಗಡೆ.
ನೋಟರಿ ನೇಮಕ
ರಾಜ್ಯದ 176 ಕಂದಾಯ ತಾಲೂಕುಗಳಲ್ಲಿ ನೋಟರಿ ನೇಮಕಕ್ಕೆ ಸಂಪುಟದ ಒಪ್ಪಿಗೆ. ಜಿಲ್ಲಾಡಳಿತದಿಂದ ಶೀಘ್ರದಲ್ಲೇ ಪಟ್ಟಿಯನ್ನು ಅಂತಿಮಗೊಳಿಸಿ ಶಿಫಾರಸು ಮಾಡುವಂತೆ ಸೂಚನೆ.
ಅನುದಾನ
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚನ್ನಮ್ಮ ವಸತಿ ಶಾಲಾ ಸಂಕೀರ್ಣ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೆ ಒಪ್ಪಿಗೆ.
ಚಿಕ್ಕಬಳ್ಳಾಪುರ ರೇಣುಮಾಕಲಹಳ್ಳಿ ಯಲ್ಲಿ ರು. 10.45 ಕೋಟಿ, ಕಲಬುರ್ಗಿಯ ಕಾಳಿಗನೂರು ಗ್ರಾಮದಲ್ಲಿ ರು. 10.70 ಕೋಟಿ, ದಾವಣಗೆರೆಯ ಅಮರಗೋಳದಲ್ಲಿ ರು. 8.67 ಕೋಟಿ, ಬೆಳ ಗಾವಿಯ ಯಮಕನಮರಡಿ ಯಲ್ಲಿ ರು. 12.45 ಕೋಟಿ, ಕಲಬುರ್ಗಿ ಅಫ್ಜಲ್ ಪುರ ತಾಲೂಕಿನ ಚೌಡಾಪುರದಲ್ಲಿ ರು. 12.05 ಕೋಟಿ, ಕೋಲಾರ ಶ್ರೀನಿವಾಸಪುರದ ಚಲ್ದಿ ಗಾನಹಳ್ಳಿಯಲ್ಲಿ 10.50 ಕೋಟಿ ವೆಚ್ಚದಲ್ಲಿ ವಸತಿ ಸಂಕೀರ್ಣ ನಿರ್ಮಾಣಕ್ಕೆ ಆಡಳಿತಾತ್ಮಕ ಒಪ್ಪಿಗೆ.
ವಿದ್ಯಾರ್ಥಿ ನಿಲಯ
2014-15ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರಿ ಗಾಗಿ 70, ಪರಿಶಿಷ್ಟ ಪಂಗಡದವರಿಗೆ 30 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಒಪ್ಪಿಗೆ.
ಎಂ.ಟ್ರ್ಯಾಕ್
ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ಬಿ-ಟ್ರ್ಯಾಕ್ ಯೋಜನೆ ಮಾದರಿಯಲ್ಲಿ ಮೈಸೂರಿನಲ್ಲಿ ಎಂ-ಟ್ರ್ಯಾಕ್ ಯೋಜನೆ ಅನುಷ್ಠಾನಗೊಳಿಸಲು ರು. 40 ಕೋಟಿ ಬಿಡುಗಡೆ ಮಾ ಡಲು ಸಂಪುಟದ ಆಡಳಿತಾತ್ಮಕ ಒಪ್ಪಿಗೆ.
- ಗದಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ರು. 30 ಕೋಟಿ ಬಿಡುಗಡೆಗೆ ಒಪ್ಪಿಗೆ.
- ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಕಚೇರಿ ಸ್ಥಾಪನೆಗೆ ಜಾಗ ನೀಡುವಂತೆ ಸ್ಥಳೀಯ ಮಹಾನಗರ ಪಾಲಿಕೆ ಮಾಡಿದ್ದ ಶಿಫಾರಸಿಗೆ ಒಪ್ಪಿಗೆ.
- ಮಾ.13ರಂದು ರಾಜ್ಯ ಬಜೆಟ್ ಮಂಡನೆ.
-13ರಿಂದ 31ರವರೆಗೆ ಬಜೆಟ್ ಅಧಿವೇಶನ ನಡೆಸುವುದಕ್ಕೆ ಸಂಪುಟದ ಒಪ್ಪಿಗೆ.
ಎಚ್1ಎನ್1 ಬಗ್ಗೆ ಚರ್ಚೆ
ರಾಜ್ಯದಲ್ಲಿ ಹೆಚ್ಚುತ್ತಿರುವ ಎಚ್1ಎನ್1 ಖಾಯಿಲೆ ನಿಯಂತ್ರಣದ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ರಾಜ್ಯದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ವರದಿ ಆಗುತ್ತಿದೆ. ಜನ ಸಾಮಾನ್ಯರು ಆತಂಕಗೊಂಡಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವ ಖಾದರ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಪ್ರಾಧ್ಯಾಪಕರ ನೇಮಕ
ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 862 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ಒಪ್ಪಿಗೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ.