ಬೆಂಗಳೂರು: ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಮಾತನಾಡದಂತೆ ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ಬಿಗಿ ಸೂಚನೆ ನೀಡಿದ್ದರೂ, ಹೋರಾಟಕ್ಕೆ ಚಾಲನೆ ನೀಡಿದ ಸಂಘಟನೆಗಳು ಮಾತ್ರ ಸುಮ್ಮನೆ ಕುಳಿತಿಲ್ಲ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿದ ದಲಿತ ಸಂಘಟನೆ ನಾಯಕರು, ಕಾಂಗ್ರೆಸ್‍ನಲ್ಲಿ ದಲಿತ ಮುಖಂಡರನ್ನು ಮುಖ್ಯಮಂತ್ರಿಯಾಗಿ ಮಾಡದಿದ್ದರೆ ಜನಾಂದೋಲನ ನಡೆಸಲು ಮುಂದಾಗಿದ್ದಾರೆ.
ಕಳೆದ ಶಿವರಾತ್ರಿಯ ದಿನ ಸಭೆ ನಡೆಸಿದ ಎಲ್ಲ ಸಂಘಟನೆಗಳ ಮುಖಂಡರು ಸೋಮವಾರದ ಸಭೆಯಲ್ಲೂ ಭಾಗವಹಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ತಮ್ಮ ಬೇಡಿಕೆಗೆ ತಣ್ಣೀರು ಎರಚಿರುವುದನ್ನು ತೀಕ್ಷ್ಣ ವಾಗಿ ಪರಿ ಗಣಿಸಿರುವ ಮುಖಂಡರು, ಫೆ.24ರಂದು ಬಳ್ಳಾರಿಯಿಂದ ಜನಾಂದೋಲನ ನಡೆಸಲು ನಿರ್ಧರಿಸಿದ್ದಾರೆ. ಆದರೆ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಮಾತನಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿರುವುದರಿಂದ ಈ ಹೋರಾಟ ತೀವ್ರತೆ ಕಳೆದುಕೊಂಡಿದೆ.