ರಾಜಕೀಯ

ಮುಂದಿನ ಎರಡೂವರೆ ತಿಂಗಳಲ್ಲಿ ಬಿಜೆಪಿಗೆ 10ಕೋಟಿ ಸದಸ್ಯರ ನೋಂದಣಿ

Rashmi Kasaragodu

ಬೆಂಗಳೂರು: ಮುಂದಿನ ಎರಡೂವರೆ ತಿಂಗಳಲ್ಲಿ ಹತ್ತು ಕೋಟಿಗೂ ಅಧಿಕ ಸದಸ್ಯರ ನೋಂದಣಿ ಮಾಡಿ ಬಿಜೆಪಿಯನ್ನು ವಿಶ್ವದಲ್ಲೇ ಅತಿ ದೊಡ್ಡ ಪಕ್ಷವನ್ನಾಗಿ ರೂಪಿಸುತ್ತೇವೆ ಎಂದು ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದ್ದಾರೆ.
 
ಪ್ರಜಾತಂತ್ರ ರಾಷ್ಟ್ರಗಳಲ್ಲಿ ಅಮೆರಿಕದ ಡೆಮಕ್ರಟಿಕ್ ಪಕ್ಷವು 4.31 ಕೋಟಿ ಸದಸ್ಯರನ್ನು ಹೊಂದಿದೆ. ಇನ್ನು ಚೀನಾದ ಕಮ್ಯುನಿಸ್ಟ್  ಪಕ್ಷವು 8.27 ಕೋಟಿ ಸದಸ್ಯರನ್ನು ಹೊಂದಿದೆ. ಆದರೆ ಬಿಜೆಪಿಯು ಮಾ.31ರೊಳಗೆ 10 ಕೋಟಿ ಸದಸ್ಯರನ್ನು ನೇಮಿಸಿಕೊಳ್ಳಲಿದೆ.  ರಾಜ್ಯದಲ್ಲಿಯೂ ಒಂದು ಕೋಟಿ ಸದಸ್ಯರ ಗಡಿ ದಾಟಲಿದ್ದೇವೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಈಗಾಗಲೇ ದೇಶಾದ್ಯಂತ ಮೂರೂವರೆ ಕೋಟಿಗೂ ಅಧಿತ ಸದಸ್ಯರ ನೋಂದಣಿಯಾಗಿದ್ದು, ರಾಜ್ಯದಲ್ಲಿ 25 ಲಕ್ಷ ದಷ್ಟಾಗಿದೆ. ಮಾ.31ರೊಳಗೆ ಯುದ್ದೋಪಾದಿಯಲ್ಲಿ ನೋಂದಣಿ ಅಭಿಯಾನ ನಡೆಸುತ್ತೇವೆ. ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಿದೆ. ಈ ಮೂಲಕ ಬಿಜೆಪಿಯು ವಿಶ್ವದಾಖಲೆ ಮುರಿಯಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಥಳೀಯ ಮುಖಂಡರ ಮನೆಯಲ್ಲಿಯೂ ಬಿಜೆಪಿಗೆ ಹೆಸರು ನೋಂದಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸದಸ್ಯತ್ವ ಅಭಿಯಾನದ ಸಂದರ್ಭದಲ್ಲಿ ಬಿಜೆಪಿಗೆ ಬಲವಿಲ್ಲದ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ರಾಜ್ಯದಲ್ಲಿ ಹಳೆ ಮೈಸೂರು ಭಾಗ ಹಾಗೂ ದೇಶದಲ್ಲಿ ಪೂರ್ವ ಹಾಗೂ ದಕ್ಷಿಣ ಭಾರತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಹಳೆ ಮೈಸೂರು ಭಾಗದ ಮಂಡ್ಯ,  ಮೈಸೂರು, ಹಾಸನ, ರಾಮನಗರ, ಕೋಲಾರ ಇತರ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ರವಿ ಹೇಳಿದರು.

ಸಿದ್ದು ಕುರ್ಚಿ ಅಲುಗಾಡುತ್ತಿದೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕುರ್ಚಿ ಅಲುಗಾಡಲು ಆರಂಭಿಸಿದೆ. 2015 ಅವರ ಪಾಲಿಗೆ ಶುಭಸೂಚಕವಾಗಿರುವುದಿಲ್ಲ. ಸಿದ್ಧರಾಮಯ್ಯ ವಿರುದ್ಧ ಮೂಲ ಕಾಂಗ್ರೆಸಿಗರು ಅಸಮಾಧಾನಗೊಂಡಿದ್ದಾರೆ. ಒಬ್ಬೊಬ್ಬರೇ ಸಚಿವರು ಹಾಗೂ ಮುಖಂಡರು ಮಾತನಾಡಲು ಆರಂಭಿಸಿದ್ದಾರೆ.  ಶೀಘ್ರದಲ್ಲಿಯೇ ಸಿದ್ಧರಾಮಯ್ಯ ಅವರ ವಿರುದ್ಧ ಇನ್ನಷ್ಟು ಧ್ವನಿಗಳು ಕೇಳಿ ಬರುವ ಸಾಧ್ಯತೆಯಿದೆ ಎಂದು ಸಿ.ಟಿ ರವಿ ಹೇಳಿದರು.

SCROLL FOR NEXT