ಮೈಸೂರು: ಅರ್ಕಾವತಿ ಡಿನೋಟಿಫಿಕೇಷನ್ ಭಯ ಮುಖ್ಯಮಂತ್ರಿ ಸಿದ್ದರರಾಮಯ್ಯ ಅವರಿಗೆ ಕನಸಿನಲ್ಲಿಯೂ ಕಾಡುತ್ತಿದೆ ಎಂದು ಕೇಂದ್ರದ ಕಾನೂನು ಸಚಿವ ಡಿ.ವಿ ಸದಾನಂದಗೌಡ ವ್ಯಂಗ್ಯವಾಡಿದರು.
ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಂಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಪ್ಪು ಮಾಡಿದವರು ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಾರೆ. ಮುಖ್ಯಮಂತ್ರಿಗೂ ಅಂತೆಯೇ ಆಗಿದೆ.
ಅರ್ಕಾವತಿ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪು ಮಾಡದಿದ್ದರೆ ತನಿಖೆಗೆ ಆದೇಶಿಸುತ್ತಿದ್ದರು. ಪದೇ ಪದೆ ಅವರು ನೀಡುತ್ತಿರುವ ಸಮರ್ಥನೆ ಮತ್ತು ವರ್ತನೆ ಅವರ ತಪ್ಪನ್ನು ಎತ್ತಿ ತೋರಿಸುತ್ತಿದೆ.
ನನ್ನ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಷನ್ ಆಗಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಹನ್ನೊಂದು ತಿಂಗಳು ಆಡಳಿತ ನಡೆಸಿದ್ದೇನೆ. ಈ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಷನ್ ನಡೆದಿಲ್ಲ. ಯಾರೋ ಒಬ್ಬರ ಹೆಸರು ಹೇಳಲು ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಹೆಸರು ಹೇಳುವುದು ತಪ್ಪು ಎಂದು ತಿರುಗೇಟು ನೀಡಿದರು.