ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಡಿನೋಟಿಫಿಕೇಶನ್ ಭೂತ ಗುರುವಾರ ರಾಜ್ಯಪಾಲರ ಅಂಗಳಕ್ಕೆ ಅಧಿಕೃತವಾಗಿ ಪ್ರವೇಶಿಸಲಿದೆ.
ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಬಿಜೆಪಿ ನಿಯೋಗ ಗುರುವಾರ ರಾಜಭವನಕ್ಕೆ
ತೆರಳಲಿದೆ. ಬಿಜೆಪಿ ಕಾನೂನು ವಿಭಾಗವು ದೂರು ನೀಡಲಿದ್ದು, ಡಿನೋಟಿಫಿಕೇಶನ್ ಗೆ ಸಂಬಂಧಿಸಿ ಸಿದ್ದರಾಮಯ್ಯ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಎನ್ನುವುದು ದೂರಿನ ಪ್ರಮುಖ ಅಂಶವಾಗಿದೆ.
ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ದುರುಪಯೋಗಪಡಿಸಿ ಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಪ್ರತಿದಿನ ಆರೋಪಿಸುತ್ತಿದ್ದಾರೆ. ಏತನ್ಮಧ್ಯೆ, ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಗುರುವಾರ ಸಂಜೆ ಕಾನೂನು ವಿಭಾಗವು ರಾಜ್ಯಪಾಲರನ್ನು ಭೇಟಿ ಮಾಡಿ ಕ್ರಿಮಿನಲ್ ವಿಚಾರಣೆಗೆ ಅನುಮತಿ ಕೇಳಲಿದೆ.
ಕಾನೂನು ತಜ್ಞರೊಂದಿಗೆ ಬಿಜೆಪಿ ಮುಖಂಡರು ಬುಧವಾರವಿಡೀ ಚರ್ಚೆ ನಡೆಸಿದ್ದು, ಮುಂದಿನ ಕಾನೂನು ಹೋರಾಟದ ಬಗೆಗೂ ಚಿಂತಿಸಲಾಗಿದೆ.
ಒಂದೊಮ್ಮೆ ರಾಜ್ಯಪಾಲರು ಅನುಮತಿ ನೀಡದಿದ್ದರೆ ಏನು ಮಾಡಬೇಕು ಎಂಬ ಬಗೆಗೂ ಪರಿಶೀಲಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡಿದರೆ ಲೋಕಾಯುಕ್ತ ಕೋರ್ಟ್‍ನಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟ ನಡೆಸುವ ಬಗೆಗೂ ಚರ್ಚೆ ನಡೆಸಲಾಗಿದೆ.
ಬಿಜೆಪಿಯ ರಾಷ್ಟ್ರೀಯ ಮುಖಂಡರು ಹಾಗೂ ಹಿರಿಯ ವಕೀಲರೊಂದಿಗೆ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮುಜುಗರವಾಗದಂತೆ ವರ್ತಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.