ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಅವರ ಕುಟುಂಬ ವರ್ಗಕ್ಕೆ ನೀಡಿರುವ ವಿಶೇಷ ಭದ್ರತಾ ಸೌಲಭ್ಯವನ್ನು ವಾಪಸ್ ಪಡೆಯುವ ವಿಚಾರದ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ತಮ್ಮನ್ನು ಭೇಟಿ ಮಾಡಿದ ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ನೀಡಿದ ಮನವಿ ಪರಿಶೀಲಿಸಿದ ಬಳಿಕ ಸಿಎಂ ಈ ಆದೇಶ ನೀಡಿದ್ದು, ಕಚೇರಿ ಕಳೆದುಕೊಂಡಿರುವ ಗೌಡರ ಕುಟುಂಬಕ್ಕೆ ಈಗ ಭದ್ರತಾ ಖೋತಾದ ಭೀತಿಯನ್ನು ಸಿದ್ದರಾಮಯ್ಯ ಒಡ್ಡಿದ್ದಾರೆ.
ಮನವಿಯಲ್ಲಿ ಏನಿತ್ತು?: ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಆಕ್ಟ್ ಅನ್ವಯ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ, ಅವರ ಕುಟುಂಬಕ್ಕೆ 10 ವರ್ಷ ವಿಶೇಷ ಭದ್ರತೆ ಸೌಲಭ್ಯ ಕಲ್ಪಿಸಲಾಗಿದೆ. ಮಾಜಿ ಪ್ರಧಾನಿಗಳ ಮಕ್ಕಳು ಒಂದೇ ಕುಟುಂಬದಲ್ಲಿ ವಾಸವಿದ್ದರೆ ಮಾತ್ರ ಈ ಸೌಲಭ್ಯ ಅನ್ವಯ. ಇಲ್ಲವಾದರೆ ಮಾಜಿ ಪ್ರಧಾನಿ, ಅವರ ಪತ್ನಿಗೆ ಮಾತ್ರ ನೀಡಬೇಕು. ಆದರೆ ಗೌಡರು ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿ 10 ವರ್ಷಗಳಾಗಿದ್ದು, ಮಕ್ಕಳು ಪ್ರತ್ಯೇಕವಾಗಿ ವಾಸವಿದ್ದಾರೆ. ಆದರೂ ಭದ್ರತಾ ಸೌಲಭ್ಯ ಕಲ್ಪಿಸಲಾಗಿದೆ. ಅವರ ಮಕ್ಕಳು ಈ ಸೌಲಭ್ಯ ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಹಾಗಾಗಿ ಭದ್ರತಾ ಸೌಲಭ್ಯವನ್ನು ವಾಪಾಸ್ ಪಡೆಯಬೇಕು.